ಲೂಯಿಸ್‌ವಿಲ್ಲೆ (ಕೆಂಟುಕಿ):ಅಮೆರಿಕದ ಆಗ್ನೇಯ ಪ್ರದೇಶದ ಲೂಯಿಸ್‌ವಿಲ್ಲೆಯಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬ ತನ್ನ ಕೆಲಸದ ಸ್ಥಳದಲ್ಲಿ ಸೋಮವಾರ ಬೆಳಗ್ಗೆ ಗುಂಡಿನ ದಾಳಿ ನಡೆಸಿ, ಕೆಂಟುಕಿಯ ಗವರ್ನರ್ ಅವರ ಆಪ್ತ ಸ್ನೇಹಿತ ಸೇರಿದಂತೆ ಐದು ಜನರನ್ನು ಕೊಲೆ ಮಾಡಿದ್ದಾನೆ. ಅಲ್ಲದೇ, ಗುಂಡಿನ ದಾಳಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓಲ್ಡ್ ನ್ಯಾಶನಲ್ ಬ್ಯಾಂಕ್‌ನಲ್ಲಿ ಶಸ್ತ್ರಸಜ್ಜಿತವಾದ ಆರೋಪಿ ಈ ಗುಂಡಿನ ದಾಳಿ ಮಾಡಿದ್ದಾನೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಆಗ ಎರಡು ಕಡೆಗಳಿಂದ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಶೂಟರ್‌ನನ್ನು ಸದೆಬಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಲೂಯಿಸ್‌ವಿಲ್ಲೆ ಮೆಟ್ರೋ ಪೊಲೀಸ್ ಇಲಾಖೆಯ ಮುಖ್ಯಸ್ಥ ಜಾಕ್ವೆಲಿನ್ ಗ್ವಿನ್ ವಿಲ್ಲರೊಯೆಲ್ ಹೇಳಿದ್ದಾರೆ. ಈ ದಾಳಿಯನ್ನು ಉದ್ದೇಶಿತ ಹಿಂಸೆಯ ಕೃತ್ಯ ಎಂದು ಮೇಯರ್ ಕ್ರೇಗ್ ಗ್ರೀನ್‌ಬರ್ಗ್ ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆ ದಕ್ಷಿಣಕ್ಕೆ ಸುಮಾರು 160 ಮೈಲಿ ದೂರದಲ್ಲಿರುವ ಟೆನ್ನೆಸ್ಸೀಯ ನ್ಯಾಶ್‌ವಿಲ್ಲೆಯಲ್ಲಿರುವ ಕ್ರಿಶ್ಚಿಯನ್ ಪ್ರಾಥಮಿಕ ಶಾಲೆಯಲ್ಲಿ ಮಾಜಿ ವಿದ್ಯಾರ್ಥಿಯೊಬ್ಬ ಮೂರು ಮಕ್ಕಳು ಸೇರಿ ಆರು ಜನರನ್ನು ಕೊಲೆ ಮಾಡಿದ್ದ. ಇದರ ಬೆನ್ನಲ್ಲೇ ಈ ಗುಂಡಿನ ದಾಳಿ ನಡೆದಿದೆ. ಅಲ್ಲದೇ, ಈ ವರ್ಷದ ವರದಿಯಾದ 15ನೇ ಸಾಮೂಹಿಕ ಹತ್ಯೆ ಇದಾಗಿದೆ. ಈ ಹಿಂದಿನ ಗುಂಡಿನ ದಾಳಿಯಲ್ಲಿ ನ್ಯಾಶ್‌ವಿಲ್ಲೆ ಗವರ್ನರ್ ಮತ್ತು ಅವರ ಪತ್ನಿ ಸಾವನ್ನಪ್ಪಿದ್ದರು.
ಗುಂಡಿನ ದಾಳಿಯ ಲೈವ್‌ಸ್ಟ್ರೀಮ್: ಈ ದಾಳಿ ನಡೆಸಿದ ಆರೋಪಿಯನ್ನು 25 ವರ್ಷದ ಕಾನರ್ ಸ್ಟರ್ಜನ್ ಎಂದು ಪೊಲೀಸರು ಗುರುತಿಸಿದ್ದಾರೆ. ಈ ದಾಳಿಯ ದೃಶ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿಲ್ಲರೊಯೆಲ್ ತಿಳಿಸಿದ್ದಾರೆ. ಮತ್ತೊಂದೆಡೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮಾಲೀಕತ್ವದ ಮೆಟಾ ಕಂಪನಿಯು ಈ ದುರಂತ ಘಟನೆಯ ಲೈವ್‌ಸ್ಟ್ರೀಮ್ ಅನ್ನು ತಕ್ಷಣವೇ ತೆಗೆದುಹಾಕಲಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಈ ಗುಂಡಿನ ದಾಳಿಯಲ್ಲಿ ತನ್ನ ಹತ್ತಿರದ ಸ್ನೇಹಿತರಾದ ಟಾಮಿ ಎಲಿಯಟ್ ಕಳೆದುಕೊಂಡಿದ್ದೇನೆ ಎಂದು ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್ ಹೇಳಿದ್ದಾರೆ. ಟಾಮಿ ಎಲಿಯಟ್ ನನ್ನ ಕಾನೂನು ವೃತ್ತಿಗೆ ನನಗೆ ಸಹಾಯ ಮಾಡಿದ್ದರು. ನನಗೆ ಗವರ್ನರ್ ಆಗಲು ಸಹ ಪ್ರೋತ್ಸಾಹಿಸಿದ್ದರು ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಗುಂಡಿನ ದಾಳಿಯಲ್ಲಿ 57 ವರ್ಷದ ಡೀನಾ ಎಕರ್ಟ್, ಜೋಶ್ ಬ್ಯಾರಿಕ್, ಜಿಮ್ ಟಟ್ ಮತ್ತು ಜೂಲಿಯಾನಾ ಫಾರ್ಮರ್ ಕೂಡ ಸಾವನ್ನಪ್ಪಿದ್ದಾರೆ. ಇತರ 9 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
100 ದಿನದಲ್ಲಿ 15ನೇ ಸಾಮೂಹಿಕ ಹತ್ಯೆ: ಸಾಮೂಹಿಕ ಹತ್ಯೆಗಳ ಕುರಿತ ಈಶಾನ್ಯ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಅಸೋಸಿಯೇಟೆಡ್ ಪ್ರೆಸ್ ಮತ್ತು ಯುಎಸ್ಎ ಟುಡೇ ಮಾಹಿತಿ ಪ್ರಕಾರ ಈ ವರ್ಷದ 100 ದಿನದಲ್ಲಿ ನಡೆದ 15ನೇ ಸಾಮೂಹಿಕ ಹತ್ಯೆ ಘಟನೆ ಇದಾಗಿದೆ. 2009ರಲ್ಲಿ ಏಪ್ರಿಲ್ 10ರ ವೇಳೆಗೆ ಇಂತಹ 16 ಪ್ರಕರಣಗಳು ವರದಿಯಾಗಿದ್ದವು. ಇದರ ನಂತರ ಇಂತಹ ಘಟನೆಗಳು ತಗ್ಗಿದ್ದವು. 2019 ಮತ್ತು 2022ರ ಇಡೀ ವರ್ಷದಲ್ಲಿ ಕ್ರಮವಾಗಿ 45 ಮತ್ತು 42 ಸಾಮೂಹಿಕ ಹತ್ಯೆ ಪ್ರಕರಣಗಳು ದಾಖಲಾಗಿದ್ದವು.
ಇದನ್ನೂ ಓದಿ:ಪಾಕಿಸ್ತಾನದ ಕ್ವೆಟ್ಟಾದಲ್ಲಿ ಸ್ಫೋಟ: 4 ಸಾವು, 15 ಮಂದಿಗೆ ಗಾಯ