ವಾಷಿಂಗ್ಟನ್(ಅಮೆರಿಕ): ಪಂಚ ರಾಜ್ಯಗಳ ಪೈಕಿ ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದ ವಿಧಾನಸಭಾ ಚುನಾವಣಾ ಫಲಿತಾಂಶ ಭಾನುವಾರ ಹೊರಬಿದ್ದಿದೆ. ಈ ನಾಲ್ಕು ರಾಜ್ಯಗಳ ಪೈಕಿ 3 ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿ ಅಧಿಕಾರ ವಹಿಸಿಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್ನಲ್ಲಿ ಅಮೆರಿಕದ ಗಾಯಕಿ, ನಟಿ ಮೇರಿ ಮಿಲ್ಬೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ.
"ಭಾರತದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಹೊರಬಿದ್ದಿದ್ದು, ಬಿಜೆಪಿ ದೇಶದ ಹೃದಯ ಭಾಗದ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳಲ್ಲಿ ಗೆಲುವು ಸಾಧಿಸಿದೆ. ಇದು ಪ್ರಧಾನಿ ಮೋದಿಯವರ 2024ರ ಭರ್ಜರಿ ಗೆಲುವಿನ ಮುನ್ಸೂಚನೆ. ಮೋದಿ ಭಾರತ ಮೊದಲು ಎನ್ನುವ ನಾಯಕ ಮತ್ತು ಅಮೆರಿಕ-ಭಾರತದ ಸಂಬಂಧಕ್ಕೂ ಅತ್ಯುತ್ತಮ ನಾಯಕ" ಎಂದು ಹೊಗಳಿದ್ದಾರೆ.
ಇದನ್ನೂ ಓದಿ :ಕೆಲಸ ಮಾಡದೆ ಸೋಶಿಯಲ್ ಮೀಡಿಯಾ ಸಮರ ನಿಷ್ಪ್ರಯೋಜಕ ಎಂಬುದನ್ನು ಚುನಾವಣೆ ತೋರಿಸಿದೆ: ಗಂಭೀರ್
ಈ ಹಿಂದೆಯೂ ಕೂಡ ಮೇರಿ ಮಿಲ್ಬೆನ್ ಅವರು ಬಿಹಾರದ ಸಿಎಂ ನಿತೀಶ್ ಕುಮಾರ್ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾಗ ಅದನ್ನು ಖಂಡಿಸಿದ್ದರು. ಇದೇ ವೇಳೆ ಮಹಿಳೆಯರ ಪರವಾದ ಪ್ರಧಾನಿ ಮೋದಿ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದರು. "ನಾನು ಭಾರತವನ್ನು ಪ್ರೀತಿಸುತ್ತೇನೆ. ಪ್ರಧಾನಿ ಮೋದಿ ಭಾರತೀಯ ನಾಗರಿಕರ ಅತ್ಯುತ್ತಮ ನಾಯಕ. ಅವರು ಯುಎಸ್ ಜೊತೆಗಿನ ಉತ್ತಮ ಸಂಬಂಧಕ್ಕೂ ನಾಯಕರು. ಮೋದಿ ಮಹಿಳೆಯರ ಪರವಾಗಿದ್ದಾರೆ" ಎಂದಿದ್ದರು.