ಪೇಶಾವರ :ಪಾಕಿಸ್ತಾನದ ದೂರದ ಹಳ್ಳಿಯೊಂದಕ್ಕೆ ಇತ್ತೀಚೆಗೆ ಪ್ರಯಾಣ ಬೆಳೆಸಿದ್ದ ಭಾರತದ ರಾಜಸ್ಥಾನದ ಇಬ್ಬರು ಮಕ್ಕಳ ತಾಯಿ ಅಂಜು ಎಂಬಾಕೆ ಮಂಗಳವಾರ (ನಿನ್ನೆ) ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ತಮ್ಮ ಫೇಸ್‌ಬುಕ್ ಸ್ನೇಹಿತನನ್ನು ವಿವಾಹವಾಗಿದ್ದಾರೆ. ಅಷ್ಟೇ ಅಲ್ಲದೆ, ಫಾತಿಮಾ ಎಂದು ಹೊಸದಾಗಿ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ರಾಜಸ್ಥಾನದ ಭಿವಾಡಿ ಜಿಲ್ಲೆಯ 34 ವರ್ಷದ ಮಹಿಳೆ ಅಂಜು ಫೇಸ್ಬುಕ್ನಲ್ಲಿ ಪರಿಚಯವಾದ ಪಾಕಿಸ್ತಾನದ ಅಪ್ಪರ್ ದಿರ್ ಜಿಲ್ಲೆಯ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ನಸ್ರುಲ್ಲಾ ಎಂಬಾತನನ್ನು ಭೇಟಿಯಾಗಲು ಪಾಕ್ಗೆ ತೆರಳಿದ್ದರು. ಬಳಿಕ, ವಾಟ್ಸ್ಆ್ಯಪ್ ಕರೆ ಮಾಡಿ ನಾನು ಲಾಹೋರ್ನಲ್ಲಿದ್ದೇನೆ. 3,4 ದಿನದಲ್ಲಿ ಬರುವುದಾಗಿ ಹೇಳಿದ್ದಳು ಎಂದು ಆಕೆಯ ಪತಿ ಅರವಿಂದ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.
"ನಸ್ರುಲ್ಲಾ ಮತ್ತು ಅಂಜು ವಿವಾಹವನ್ನು ಮಂಗಳವಾರ ಇಸ್ಲಾಂ ಪದ್ಧತಿಯಂತೆ (ನಿಕಾಹ್) ವಿಧಿವತ್ತಾಗಿ ನಡೆಸಲಾಯಿತು. ಅವರು ಇಸ್ಲಾಂಗೆ ಮತಾಂತರಗೊಂಡ ನಂತರ ವಿವಾಹ ಮಾಡಲಾಗಿದೆ" ಎಂದು ಅಪ್ಪರ್ ದಿರ್ ಜಿಲ್ಲೆಯ ಮೊಹರಾರ್ ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಮುಹಮ್ಮದ್ ವಹಾಬ್ ಅಲ್ಲಿನ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.
ಅಪ್ಪರ್ ದಿರ್‌ನಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ಕುಟುಂಬ ಸದಸ್ಯರು, ಪೊಲೀಸ್ ಸಿಬ್ಬಂದಿ ಮತ್ತು ವಕೀಲರ ಸಮ್ಮುಖದಲ್ಲಿ ಮದುವೆ ನಡೆದಿದೆ. ವಿವಾಹದ ಬಳಿಕ ಜೋಡಿಯು 'ಅಂಜು ವೆಡ್ಸ್ ನಸ್ರುಲ್ಲಾ' ಎಂಬ ಶೀರ್ಷಿಕೆಯ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗುತ್ತಿದೆ. ಇದರಲ್ಲಿ ಅಂಜು ಹಾಗೂ ನಸ್ರುಲ್ಲಾ ಗಂಡ-ಹೆಂಡತಿಯಾಗಿ ಪರ್ವತ ತಾಣಗಳಲ್ಲಿ ಸುತ್ತಾಡುವ ದೃಶ್ಯವಿದೆ.
ಮಲಕಂಡ್ ವಿಭಾಗದ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ನಾಸಿರ್ ಮೆಹಮೂದ್ ಸತ್ತಿ, ನಿಕಾಹ್ ದೃಢಪಡಿಸಿದ್ದಾರೆ. ಭಾರತೀಯ ಮಹಿಳೆ ಅಂಜು ಇಸ್ಲಾಂಗೆ ಮತಾಂತರಗೊಂಡ ನಂತರ ಫಾತಿಮಾ ಎಂದು ಹೆಸರು ಬದಲಿಸಲಾಗಿದೆ. ಪೊಲೀಸ್ ಭದ್ರತೆಯಲ್ಲಿ ವಿವಾಹ ನಡೆದಿದೆ. ಮಹಿಳೆಯನ್ನು ನ್ಯಾಯಾಲಯದಿಂದ ಮನೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.