ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಅವರ ಪತ್ನಿ ಔತಣ ನೀಡಲಿದ್ದಾರೆ. ಅಮೆರಿಕದ ಪ್ರಥಮ ಮಹಿಳೆ ಹಾಗೂ ಪ್ರಜೆ ನೀಡುವ ಶ್ವೇತಭವನದ ಔತಣಕೂಟಕ್ಕೆ 400 ಅತಿಥಿಗಳನ್ನು ಆಹ್ವಾನಿಸಲಾಗಿದೆ.
ಈ ಔತಣಕೂಟದಲ್ಲಿ ವಿಶೇಷವಾಗಿ ಸಿರಿಧಾನ್ಯ, ಕಾರ್ನ್ ಕರ್ನಲ್ ಸಲಾಡ್ ಮತ್ತು ಸ್ಟಫ್ಡ್ ಮಶ್ರೂಮ್‌ಗಳು ಪ್ರಮುಖವಾಗಿ ಔತಣಕೂಟದ ಮೆನುವಿನಲ್ಲಿ ಟಾಪ್ ಸ್ಥಾನ ಪಡೆದುಕೊಂಡಿವೆ. ಹೇಳಿ ಕೇಳಿ ನಮ್ಮ ಪ್ರಧಾನ ಮಂತ್ರಿ ಸಸ್ಯಾಹಾರಿ. ಈ ಅಂಶವನ್ನು ಗಮನಿಸಿರುವ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್, ಸಸ್ಯಾಹಾರಿ ಪಾಕಪದ್ಧತಿಯಲ್ಲಿ ಪರಿಣತಿ ಹೊಂದಿರುವ ಬಾಣಸಿಗ ನೀನಾ ಕರ್ಟಿಸ್ ಅವರನ್ನು ಶ್ವೇತಭವನದ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ಮತ್ತು ಅದ್ಭುತವಾದ ಸಸ್ಯಾಹಾರಿ ಮೆನುವನ್ನು ತಯಾರಿಸುವ ಜವಾಬ್ದಾರಿ ನೀಡಿದ್ದಾರೆ.
ಮೋದಿಗೆ ನೀಡುವ ಔತಣಕೂಟದಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ:ಶ್ವೇತಭವನದ ಸೌತ್ ಲಾನ್‌ನಲ್ಲಿ ವಿಶೇಷವಾಗಿ ಅಲಂಕರಿಸಿದ ಪೆವಿಲಿಯನ್‌ನಲ್ಲಿ ಭೋಜನಕ್ಕೆ 400 ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ ಬೈಡನ್ ಹೇಳಿದರು. ಭೋಜನದ ಮೊದಲ ಕೋರ್ಸ್ ಮ್ಯಾರಿನೇಡ್ ರಾಗಿ, ಹುರಿದ ಕಾರ್ನ್ ಕರ್ನಲ್ ಸಲಾಡ್, ಕಲ್ಲಂಗಡಿ ಮತ್ತು ಕಟುವಾದ ಆವಕಾಡೊ ಸಾಸ್ ಒಳಗೊಂಡಿರುತ್ತದೆ. ಮುಖ್ಯ ಕೋರ್ಸ್ ಸ್ಟಫ್ಡ್ ಪೋರ್ಟೊಬೆಲ್ಲೊ ಅಣಬೆಗಳು ಮತ್ತು ಕೆನೆ ಕೇಸರಿ - ಇನ್ಫ್ಯೂಸ್ಡ್ ರಿಸೊಟ್ಟೊವನ್ನು ಒಳಗೊಂಡಿರಲಿದೆ.
ಅತಿಥಿಗಳ ಮೆನುವಿನ ಪ್ರಕಾರ ಸುಮಾಕ್ - ಹುರಿದ ಸಮುದ್ರ ಬಾಸ್, ನಿಂಬೆ - ಡಿಲ್ ಮೊಸರು ಸಾಸ್, ಕ್ರಿಸ್ಪ್ಡ್ ಸಿರಿಧಾನ್ಯದ ಕೇಕ್ಗಳು ಮತ್ತು ಸಿಹಿತಿಂಡಿಗಾಗಿ ಗುಲಾಬಿ ಮತ್ತು ಏಲಕ್ಕಿ ತುಂಬಿದ ಸ್ಟ್ರಾಬೆರಿ ಶಾರ್ಟ್‌ಕೇಕ್ ನೀಡಲಾಗುತ್ತದೆ. ಸ್ಟೋನ್ ಟವರ್ ಚಾರ್ಡೋನ್ನೆ "ಕ್ರಿಸ್ಟಿ" 2021, ಪಟೇಲ್ ರೆಡ್ ಬ್ಲೆಂಡ್ 2019 ಮತ್ತು ಡೊಮೈನ್ ಕಾರ್ನೆರೋಸ್ ಬ್ರೂಟ್ ರೋಸ್ ಪಟ್ಟಿಯಲ್ಲಿರುವ ವೈನ್‌ಗಳಾಗಿವೆ.
ಶಾಖಾಹಾರಿ ಎಕ್ಸ್ಪರ್ಟ್ಗಳಿಂದ ಮೆನು ರೆಡಿ: "ಅಮೆರಿಕದ ಪ್ರಥಮ ಮಹಿಳೆಯೊಂದಿಗೆ ಕೆಲಸ ಮಾಡಲು ಮತ್ತು ಅವರ ಪಾಕಶಾಲೆಯಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿರುವುದು ನಿಜವಾಗಿಯೂ ಸಂತಸ ತಂದಿದೆ. ನಾವು ನಿಜವಾಗಿಯೂ ಅಮೆರಿಕನ್ ಪಾಕಪದ್ಧತಿಯಲ್ಲಿ ಅತ್ಯುತ್ತಮವಾದುದನ್ನು ತಯಾರಿಸಿದ್ದೇವೆ. ಭಾರತೀಯ ಸಾಂಪ್ರದಾಯಿಕ ಆಹಾರಗಳನ್ನೂ ತಯಾರಿಸಲಾಗುತ್ತದೆ ಎಂದು ಕ್ಯಾಲಿಫೋರ್ನಿಯಾ ಮೂಲದ ಚೆಫ್ ಕರ್ಟಿಸ್ ಹೇಳಿದ್ದಾರೆ.