ಹರಾರೆ(ಜಿಂಬಾಬ್ವೆ):ಬಡರಾಷ್ಟ್ರ ಜಿಂಬಾಬ್ವೆಯಲ್ಲಿ ಕಳೆದ ಕೆಲವು ದಿನಗಳಿಂದ ಸಾಂಕ್ರಾಮಿಕ ರೋಗ 'ದಡಾರ' ದಿಢೀರ್ ಉಲ್ಬಣಗೊಂಡಿದೆ. ಇಲ್ಲಿಯವರೆಗೆ 700 ಮಕ್ಕಳು ಮೃತಪಟ್ಟಿರುವುದಾಗಿ ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 15 ದಿನಗಳಲ್ಲಿ ಹೆಚ್ಚಿನ ಮಕ್ಕಳು ಮಹಾಮಾರಿಗೆ ಬಲಿಯಾಗಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
ಸೆಪ್ಟೆಂಬರ್ 2022ರ ಮಾಹಿತಿ ಪ್ರಕಾರ, ದೇಶದಲ್ಲಿ 4,266 ದಡಾರ ಪ್ರಕರಣಗಳು ಚೇತರಿಕೆ ಕಂಡಿದ್ದು, 685 ಮಕ್ಕಳು ಅಸುನೀಗಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಮೊಜಾಂಬಿಕ್ನ ಪೂರ್ವ ಮಣಿಕಾಲ್ಯಾಂಡ್ ಪ್ರಾಂತ್ಯದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಜಿಂಬಾಬ್ವೆಯಲ್ಲಿ 6 ತಿಂಗಳಿಂದ 15 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಸಾಮೂಹಿಕ ಲಸಿಕೆ ಅಭಿಯಾನ ಕಾರ್ಯಕ್ರಮವನ್ನು ಸರ್ಕಾರ ಪ್ರಾರಂಭಿಸಿದೆ.
ಧಾರ್ಮಿಕ ಮುಖಂಡರ ನಡೆಯಿಂದ ರೋಗ ತೀವ್ರ: ಸಲಹೆ ಆದರೆ, ದಡಾರದ ಲಸಿಕೆ ಹಾಕಿಸಿಕೊಳ್ಳದಂತೆ ಅಲ್ಲಿನ ಧಾರ್ಮಿಕ ಮುಖಂಡರು ಸಲಹೆ ನೀಡಿದ್ದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸಾವನ್ನಪ್ಪಿವೆ ಎಂದು ಹೇಳಲಾಗ್ತಿದೆ. ಮೃತಪಟ್ಟ ಮಕ್ಕಳಲ್ಲಿ ಹಲವರು ದಡಾರ ಲಸಿಕೆ ಪಡೆದಿರಲಿಲ್ಲ ಎಂದು ವಾರ್ತಾ ಸಚಿವೆ ಮೊನಿಕಾ ಮುತ್ಫಂಗ್ವಾ ತಿಳಿಸಿದ್ದಾರೆ. ಧಾರ್ಮಿಕ ಮುಖಂಡರು ತಮಗೆ ಬೆಂಬಲ ಸೂಚಿಸಬೇಕೆಂದು ಅವರು ಇದೇ ವೇಳೆ ಮನವಿ ಮಾಡಿಕೊಂಡಿದ್ದಾರೆ.