ಬ್ಯೂನಸ್ ಐರಿಸ್(ಅರ್ಜೆಂಟೀನಾ):ಕಳೆದ ಜುಲೈ ತಿಂಗಳಲ್ಲಿ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆ ಮಾಡಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಅರ್ಜೆಂಟೀನಾದ ಉಪಾಧ್ಯಕ್ಷರ ಮೇಲೂ ದಾಳಿ ನಡೆದಿದೆ. ಆದರೆ, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಅರ್ಜೆಂಟೀನಾದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದ್ದು, ಇದರ ಬೆನ್ನಲ್ಲೇ ಘಟನೆ ನಡೆದಿದೆ.
ಅರ್ಜೆಂಟೀನಾ ಉಪಾಧ್ಯಕ್ಷೆ ಮೇಲೆ ಗುಂಡಿನ ದಾಳಿ: ಪ್ರಾಣಾಪಾಯದಿಂದ ಪಾರು - ಈಟಿವಿ ಭಾರತ ಕರ್ನಾಟಕ
ಅರ್ಜೆಂಟೀನಾ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಅವರ ಮೇಲೆ ವ್ಯಕ್ತಿಯೋರ್ವ ಗುಂಡಿನ ದಾಳಿ ಯತ್ನ ನಡೆಸಿದ್ದಾನೆ.
ಅರ್ಜೆಂಟೀನಾದ ಉಪಾಧ್ಯಕ್ಷ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್ ಅವರ ಮೇಲೆ ವ್ಯಕ್ತಿಯೋರ್ವ ಗುಂಡು ಹಾರಿಸಲು ಪ್ರಯತ್ನಿಸಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ಕ್ರಿಸ್ಟಿನಾ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ. ಉಪಾಧ್ಯಕ್ಷರ ತಲೆಗೆ ಪಿಸ್ತೂಲ್ ಇಟ್ಟಿರುವ ವ್ಯಕ್ತಿ ಟ್ರಿಗರ್ ಎಳೆದಿದ್ದಾನೆ. ಆದರೆ, ಗುಂಡು ಹಾರಿಲ್ಲ ಎಂದು ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್ ತಿಳಿಸಿದರು. ದೇಶ ಪ್ರಜಾಪ್ರಭುತ್ವಕ್ಕೆ ಮರಳಿದ ನಂತರ ನಡೆದ ಅತ್ಯಂತ ಗಂಭೀರ ಘಟನೆ ಇದಾಗಿದೆ ಎಂದಿದ್ದಾರೆ.
ಫರ್ನಾಂಡೀಸ್ ಡಿ ಕಿರ್ಚ್ನರ್ ಭ್ರಷ್ಟಾಚಾರದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದಾರೆ. ಇಂದು ಬೆಳಗ್ಗೆ ಅವರ ನಿವಾಸದೆದುರು ಘಟನೆ ನಡೆದಿದೆ. ಆರೋಪಿತ ವ್ಯಕ್ತಿ ಬ್ರೆಜಿಲ್ ಮೂಲದವನು ಎನ್ನಲಾಗ್ತಿದೆ. ಆತನ ಬಂಧನ ಮಾಡಲಾಗಿದೆ. ಫೆರ್ನಾಂಡಿಸ್ ಡಿ ಕಿರ್ಚ್ನರ್ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಸೆನೆಟ್ ಮತ್ತು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆಂದು ಹೇಳಲಾಗ್ತಿದೆ.