ವಾಷಿಂಗ್ಟನ್: ನ್ಯೂಯಾರ್ಕ್‌ನ ಶಸ್ತ್ರಚಿಕಿತ್ಸಕರು, ಅಮೆರಿಕದ ವ್ಯಕ್ತಿಯೊಬ್ಬರಿಗೆ ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಸಂಪೂರ್ಣ ಕಣ್ಣಿನ ಕಸಿ ಮಾಡಿದ್ದಾರೆ. ಆ ವ್ಯಕ್ತಿಯು ಮತ್ತೆ ದೃಷ್ಟಿ ಪಡೆಯುತ್ತಾನೆ ಎಂಬ ಮಾಹಿತಿಯನ್ನು ವೈದ್ಯರು ಖಚಿತಪಡಿಸಿಲ್ಲ.
ಹೈ-ವೋಲ್ಟೇಜ್ ವಿದ್ಯುತ್ ಅಪಘಾತದಿಂದ ಬದುಕುಳಿದ ಆರನ್ ಜೇಮ್ಸ್ ಅವರಿಗೆ 21 ಗಂಟೆಗಳ ಕಣ್ಣಿನ ಕಸಿ ಮಾಡುವ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಲಾಗಿದೆ. ಈ ವೇಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿಯ ಮುಖದ ಅರ್ಧದಷ್ಟು ಭಾಗ ಬದಲಾವಣೆಯಾಗಿದೆ. ಶಸ್ತ್ರಚಿಕಿತ್ಸಕರು ಕಾರ್ನಿಯಾಗಳನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ. ಈ ಕಾರ್ಯದಿಂದ ಕಣ್ಣು ಕಾಣಿಸದೆ ಇರುವ ಲಕ್ಷಾಂತರ ಜನರಿಗೆ ದೃಷ್ಟಿಯನ್ನು ಪಡೆದುಕೊಳ್ಳಲು ಸಹಾಯವಾಗಲಿದೆ ಎಂದು ವೈದ್ಯ ತಿಳಿಸಿದ್ದಾರೆ.
ಅಪಘಾತಕ್ಕೆ ಒಳಗಾಗಿ ಕಣ್ಣು ಕಳೆದುಕೊಂಡಿದ್ದ ಜೇಮ್ಸ್:ಅರ್ಕಾನ್ಸಾಸ್‌ನ ಹೈ-ವೋಲ್ಟೇಜ್ ಯುಟಿಲಿಟಿ ಲೈನ್ಮೆನ್ ಆಗಿ ಕೆಲಸ ಮಾಡುತ್ತಿದ್ದ ಜೇಮ್ಸ್, 2021ರಲ್ಲಿ ಆಕಸ್ಮಿಕವಾಗಿ 7,200 ವೋಲ್ಟ್ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದಾಗ ಅವರ ಮುಖದ ಹೆಚ್ಚಿನ ಭಾಗವು ಸುಟ್ಟು ಹೋಗಿತ್ತು. ಈ ವರ್ಷ ಮೇ 27 ರಂದು, ಅವರು ಕಣ್ಣಿನ ಕಸಿ ಜೊತೆಗೆ ಅಪರೂಪದ ಭಾಗಶಃ ಮುಖದ ಕಸಿ ಮಾಡಿಸಿಕೊಂಡಿದ್ದಾರೆ. ಕಸಿ ಮಾಡುವ ಕಾರ್ಯದಲ್ಲಿ 140ಕ್ಕೂ ಹೆಚ್ಚು ಆರೋಗ್ಯ ಕ್ಷೇತ್ರದ ವೃತ್ತಿಪರರು ತೊಡಗಿಸಿಕೊಂಡಿದ್ದರು.
ತುಂಬಾ ಕಠಿಣವಾದ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದ ಎನ್ವೈಯು ಲ್ಯಾಂಗೋನ್ ಹೆಲ್ತ್‌ನ ಶಸ್ತ್ರಚಿಕಿತ್ಸಕರು ಮಾತನಾಡಿ, "46 ವರ್ಷದ ಜೇಮ್ಸ್ ಅವರು ಡ್ಯುಯಲ್ ಟ್ರಾನ್ಸ್‌ಪ್ಲಾಂಟ್‌ನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕಸಿ ಮಾಡಲಾಗಿರುವ ಕಣ್ಣು ಗಮನಾರ್ಹವಾಗಿ ಆರೋಗ್ಯಕರವಾಗಿ ಕಾಣುತ್ತದೆ. ಜೊತೆಗೆ ಅವರು ಬಲಗಣ್ಣು ಇನ್ನೂ ಕೆಲಸ ಮಾಡುತ್ತದೆ'' ಎಂದು ಗುರುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಡಾ.ಎಡ್ವರ್ಡೊ ರೋಡ್ರಿಗಸ್ ಮಾಹಿತಿ:"ನಾವು ಮೊದಲ ಬಾರಿ ಯಶಸ್ವಿಯಾಗಿ ಸಂಪೂರ್ಣ ಕಣ್ಣಿನ ಹಾಗೂ ಭಾಗಶಃ ಮುಖ ಕಸಿ ಮಾಡುವ ಕಾರ್ಯವನ್ನು ಪೂರ್ಣಗೊಳಿಸಿದ್ದೇವೆ ಎಂಬುದು ಒಂದು ಅದ್ಭುತವಾದ ಸಾಧನೆ. ನಾವು ಒಂದು ಪ್ರಮುಖ ಹೆಜ್ಜೆ ಮುಂದಿಟ್ಟಿದ್ದೇವೆ. ದೃಷ್ಟಿಯನ್ನು ಪುನಃಸ್ಥಾಪಿಸಲು ಮುಂದಿನ ಅಧ್ಯಾಯಕ್ಕೆ ದಾರಿ ಮಾಡಿಕೊಟ್ಟಿದ್ದೇವೆ ಎಂದು ತಂಡದ ಪ್ರಮುಖ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರಾದ ಡಾ. ಎಡ್ವರ್ಡೊ ರೋಡ್ರಿಗಸ್ ಹೇಳಿದರು.