ರಿಯೋ ಡಿ ಜನೈರೋ( ಬ್ರೆಜಿಲ್) : ವಿಚ್ಛೇದನದ ಮೂಲಕ ಬೇಡವಾದ ಮದುವೆ ಸಂಬಂಧವನ್ನು ಕೊನೆಗೊಳಿಸಿದ ನಂತರ ಆ ಖುಷಿಯಲ್ಲಿ ಚಿತ್ರ ವಿಚಿತ್ರವಾಗಿ, ವಿಲಕ್ಷಣವಾಗಿ ಸಂಭ್ರಮಾಚರಣೆ ಮಾಡುವುದು ಇತ್ತೀಚೆಗೆ ಹೊಸ ಫ್ಯಾಷನ್ ಆಗುತ್ತಿದೆ. ಸಂಬಂಧವೊಂದನ್ನು ಕಡಿದುಕೊಂಡಾಗ ಆ ಸಂದರ್ಭವನ್ನು ಮತ್ತಷ್ಟು ಖುಷಿಯಾಗಿಸಲು ಜನ ಏನನ್ನಾದರೂ ಮಾಡಬೇಕು ಅಂದುಕೊಳ್ಳುತ್ತಾರೆ. ಇದೇ ರೀತಿ ತನ್ನ ವಿವಾಹ ಬಂಧನವನ್ನು ಅಂತ್ಯಗೊಳಿಸಿಕೊಂಡ ವ್ಯಕ್ತಿಯೊಬ್ಬ ಸಂಭ್ರಮಾಚರಣೆ ಮಾಡಲು ಹೋಗಿ ಕುತ್ತಿಗೆಯಲ್ಲಿನ ಮೂಳೆ ಮುರಿದುಕೊಂಡ ಘಟನೆ ಜರುಗಿದೆ.
ಈ ಘಟನೆ ನಡೆದಿದ್ದು ಬ್ರೆಜಿಲ್ನಲ್ಲಿ. ರಫಾಲೆ ಡೋಸ್ ಸಾಂಟೋಸ್ ತೋಸ್ತಾ ಎಂಬಾತ ಬ್ರೆಜಿಲ್ನ ಕಾಂಪೊ ಮಾಗ್ರೊ ಬಳಿಯ ಲಾಗು ಅಜುಲ್ (ಬ್ಲೂ ಲಗೂನ್) ನಲ್ಲಿ ಖುಷಿಯಲ್ಲಿ ಬಂಗೀ ಜಂಪಿಂಗ್ ಮಾಡಲು ಹೋಗಿದ್ದ. ಆದರೆ, ವಿವಾಹ ವಿಚ್ಛೇದನದ ಸಂಭ್ರಮಾಚರಣೆ ಮಾಡುವುದು ಹಾಗಿರಲಿ, ಇವಾಗ ಈತ ಸಾವಿನಿಂದ ಜಸ್ಟ್ ಪಾರಾಗಿ ಬಂದಿರುವುದು ದೊಡ್ಡ ವಿಷಯವಾಗಿದೆ. ಲಾಗು ಅಜುಲ್ನಲ್ಲಿ ಬಳಕೆಯಲ್ಲಿಲ್ಲದ ಕ್ವಾರಿಯೊಂದರಲ್ಲಿ ಈತ ಬ್ರಿಜ್ ಸ್ವಿಂಗ್ (ಸೇತುವೆ ಮಾದರಿಯಲ್ಲಿ ನೇತಾಡುವ) ಸಾಹಸ ಮಾಡಲು ಮುಂದಾಗಿದ್ದ.
ಬ್ರಿಜ್ ಸ್ವಿಂಗ್ ಎಂಬುದು ಸಾಮಾನ್ಯವಾಗಿ ಬಂಗೀ ಜಂಪಿಂಗ್ ರೀತಿಯಲ್ಲೇ ಇರುತ್ತದೆ. ಆದರೆ, ಇದರಲ್ಲಿ ಹ್ಯೂಮನ್ ಪೆಂಡುಲಮ್ ಆಗುವ ಮೊದಲೇ ಕೆಳಕ್ಕೆ ಬೀಳುವ ಹಾಗೂ ದೊಡ್ಡ ವೃತ್ತಾಕಾರದಲ್ಲಿ ನೇತಾಡುವ ಸಾಹಸ ಇರುತ್ತದೆ. ಆದರೆ, ಹೀಗೆ ಮಾಡುವಾಗ ಆಯ ತಪ್ಪಿ 70 ಅಡಿ ಪ್ರಪಾತಕ್ಕೆ ಬಿದ್ದ ಆತನ ಕುತ್ತಿಗೆಯಲ್ಲಿನ ಮೂಳೆಯೊಂದು ತುಂಡಾಗಿದೆ. ಆದರೆ ಹೇಗೋ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.