ಫ್ರಾನ್ಸ್:ಪೊಲೀಸರ ಗುಂಡಿಗೆ ಸಿಲುಕಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಇಡೀ ಫ್ರಾನ್ಸ್ ದೇಶದಲ್ಲೇ ಸಂಚಲನ ಮೂಡಿಸಿದೆ. ಕಳೆದ ಎರಡು ದಿನಗಳಿಂದ ದೇಶದ ವಿವಿಧೆಡೆ ಉದ್ವಿಗ್ನ ಸ್ಥಿತಿ ಇದೆ. ಪ್ಯಾರಿಸ್‌ನ ಹೊರವಲಯದಲ್ಲಿರುವ ರಕ್ಷಣಾ ಜಿಲ್ಲೆಯ ನಾಂಟೆರ್ರೆ ಎಂಬಲ್ಲಿ ಗುರುವಾರ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿವೆ. ಈ ವೇಳೆ ಪ್ರತಿಭಟನಾಕಾರರು ಅಲ್ಲಿದ್ದ ಪರಿಕರಗಳು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ಗಾಜಿನ ಬಾಟಲಿ ಹಾಗೂ ಕಲ್ಲುಗಳನ್ನು ಭದ್ರತಾ ಪಡೆಗಳತ್ತ ತೂರಿದ್ದಾರೆ.
ಅದೇ ಸಮಯದಲ್ಲಿ ಭದ್ರತಾ ಪಡೆಗಳು, ಕಟ್ಟಡವೊಂದರ ಸಮೀಪ ಆಕ್ರೋಶಗೊಂಡ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು. ಭಾರಿ ಕಾದಾಟದ ಮಧ್ಯದಲ್ಲಿ ಅಲ್ಲೊಬ್ಬ ವ್ಯಕ್ತಿ ರಸ್ತೆಯ ಕಟ್ಟೆಯ ಮೇಲೆ ಕುಳಿತು ಸ್ಯಾಂಡ್‌ವಿಚ್ ತಿನ್ನುತ್ತಿದ್ದ. ರಣರಂಗವಾಗಿ ಬದಲಾದ ಪ್ರದೇಶದಲ್ಲಿ ತನಗೇನಾದರೂ ಘಾಸಿಯಾಗಬಹುದೆಂಬ ಕಿಂಚಿತ್ ಭಯವೂ ಅವನಿಗಿರಲಿಲ್ಲ. ಗಲಭೆಕೋರರು ಕೂದಲೆಲೆ ದೂರದಲ್ಲಿ ಬೆಂಕಿ ಹಚ್ಚುತ್ತಿರುವುದು ಕಾಣುತ್ತದೆ. ಹಿಂಸಾಚಾರದ ನಡುವೆಯೇ ನಿರಾಳವಾಗಿದ್ದ ಆತ ಸ್ಯಾಂಡ್‌ವಿಚ್ ತಿನ್ನುತ್ತಿರುವುದನ್ನು ಹತ್ತಿರದ ಕಟ್ಟಡದಿಂದ ವ್ಯಕ್ತಿಯೊಬ್ಬರು ವಿಡಿಯೋ ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಂದುವರೆದ ಗಲಭೆಗಳು..:ಪೊಲೀಸ್ ಗುಂಡಿನ ದಾಳಿಯಲ್ಲಿ ನಹೆಲ್ ಎಂಬ ಅಲ್ಜೀರಿಯಾ ದೇಶದ ಬಾಲಕನ ಮರಣಾ ನಂತರ ಗಲಭೆಗಳು ಮುಂದುವರೆದಿವೆ. ಮಂಗಳವಾರ ರಾತ್ರಿ ಪ್ಯಾರಿಸ್‌ನ ಉಪನಗರಗಳಲ್ಲಿ ನಡೆದ ಸಂಘರ್ಷ ಗುರುವಾರ ದೇಶಾದ್ಯಂತ ವ್ಯಾಪಿಸಿದೆ. ಪ್ರತಿಭಟನಾಕಾರರು ಅನೇಕ ಕಟ್ಟಡಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನೆಗಳಲ್ಲಿ ಭಾಗವಹಿಸಿದ ಬಹುತೇಕರು ಯುವಕರು. ಇದರ ಪರಿಣಾಮವಾಗಿ ಪ್ಯಾರಿಸ್‌ನ ಉಪನಗರ ಕ್ಲಾಮಾರ್ಟ್ನಲ್ಲಿ ಗುರುವಾರ ರಾತ್ರಿ ಕರ್ಫ್ಯೂ ಹೇರಲಾಗಿತ್ತು. ಮತ್ತೊಂದೆಡೆ, ಮೇಲೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಆತನ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನಾಕಾರರು ಬುಧವಾರ ರಾತ್ರಿ ದೇಶದ ವಿವಿಧ ಭಾಗಗಳಲ್ಲಿ ಶಾಲೆಗಳು, ಪೊಲೀಸ್ ಠಾಣೆಗಳು, ಟೌನ್ ಹಾಲ್‌ಗಳು ಮತ್ತು ಇತರ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಸುಮಾರು 100 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ಪ್ಯಾರಿಸ್ ಪ್ರದೇಶವೊಂದರಲ್ಲೇ 40,000 ಪೊಲೀಸರನ್ನು ನಿಯೋಜಿಸಲಾಗಿತ್ತು.