ಇಸ್ಲಾಮಾಬಾದ್:ಇಸ್ಲಾಮಾಬಾದ್‌ನಲ್ಲಿ ಬುರ್ಖಾ ಧರಿಸಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿ ಪರಾರಿಯಾದ ಘಟನೆ ನಡೆದಿದೆ. ಹಾಡಹಗಲೇ ನಡೆದ ಈ ಅಸಭ್ಯ ವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಧಾನಿ ಇಸ್ಲಾಮಾಬಾದ್‌ನ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬಂದ ಕೀಚಕ ಆಕೆಯನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಹಠಾತ್ತಾಗಿ ನಡೆದ ಘಟನೆಯಿಂದ ಮಹಿಳೆ ಆತನಿಂದ ಕೊಸರಿಕೊಳ್ಳಲು ಒದ್ದಾಡಿದ್ದಾಳೆ. ಬಳಿಕ ಆ ಬೀದಿ ಕಾಮಣ್ಣ ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಇದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ವಿಡಿಯೋಗೆ ಪ್ರತಿಕ್ರಿಯಿಸಿರುವ ಹಿರಿಯ ಪತ್ರಕರ್ತ ಹಮೀದ್ ಮಿರ್, ಈ ವ್ಯಕ್ತಿಯನ್ನು ಹಿಡಿದು ಶಿಕ್ಷಿಸಬೇಕು. ಮಹಿಳೆಯನ್ನು ಬಹಿರಂಗವಾಗಿ ಈ ರೀತಿ ನಡೆಸಿಕೊಂಡಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ಕಠಿಣ ಶಿಕ್ಷೆ ನೀಡುವ ಮೂಲಕ ಇಂತಹ ಪುರುಷರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.