ಬೀಜಿಂಗ್(ಚೀನಾ) :ತನ್ನ ಮೂತ್ರದಲ್ಲಿ ರಕ್ತವನ್ನು ಕಂಡು ಮತ್ತು ನಿಯಮಿತವಾಗಿ ಹೊಟ್ಟೆ ನೋವನ್ನು ಅನುಭವಿಸಿದ ನಂತರ ವೈದ್ಯರ ಬಳಿಗೆ ಹೋದ ಚೀನಾದ ವ್ಯಕ್ತಿಯೊಬ್ಬರು ಅಂಡಾಶಯ ಮತ್ತು ಗರ್ಭಾಶಯವನ್ನು ಹೊಂದಿರುವುದು ತಿಳಿದು ಬಂದಿದೆ. ಕ್ರೋಮೋಸೋಮ್ ವಿಶ್ಲೇಷಣೆ ಪರೀಕ್ಷೆಯ ನಂತರ ಅವನು ಜೈವಿಕವಾಗಿ ಮಹಿಳೆ ಎಂದು ವೈದ್ಯರು ತಿಳಿಸಿದ್ದಾರೆ. 33 ವರ್ಷಗಳಿಂದ ಪುರುಷ ಎಂದು ಗುರುತಿಸಿಕೊಂಡಿದ್ದ ಚೆನ್ ಲಿ, ತನ್ನ ಗುರುತನ್ನು ರಕ್ಷಿಸಲು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಚೆನ್ ಪ್ರೌಢಾವಸ್ಥೆಯಲ್ಲಿ ತನ್ನ ಅನಿಯಮಿತ ಮೂತ್ರ ವಿಸರ್ಜನೆಯನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ನಂತರ ಅವರ ಮೂತ್ರದಲ್ಲಿ ರಕ್ತ ಬರುವ ಸಮಸ್ಯೆ ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಅವರ ಹೊಟ್ಟೆ ನೋವು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಇರುವುದನ್ನು ಗಮನಿಸಿದ ವೈದ್ಯರು ಅವರಿಗೆ ಅಪೆಂಡಿಸೈಟಿಸ್ ಎಂದು ಚಿಕಿತ್ಸೆ ನೀಡಿದ್ದರು. ಆದರೂ ರೋಗಲಕ್ಷಣಗಳು ಮುಂದುವರೆಯಿತು.
ಕಳೆದ ವರ್ಷ, ತಪಾಸಣೆಯ ಸಮಯದಲ್ಲಿ ಚೆನ್ ಅವರಿಗೆ ಸ್ತ್ರೀಯ ಲೈಂಗಿಕ ವರ್ಣತಂತುಗಳು ಇರುವುದು ತಿಳಿದು ಬಂದಿದೆ. ಮತ್ತೊಂದು ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಗರ್ಭಾಶಯ ಮತ್ತು ಅಂಡಾಶಯ ಸೇರಿದಂತೆ ಸ್ತ್ರೀ ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿದ್ದಾರೆಂದು ತಿಳಿದು ಬಂದಿದೆ. ಚೆನ್ ಗಂಡು ಮತ್ತು ಹೆಣ್ಣು ಸಂತಾನೋತ್ಪತ್ತಿ ಅಂಗಗಳೊಂದಿಗೆ ಇಂಟರ್‌ಸೆಕ್ಸ್‌ನಲ್ಲಿ ಜನಿಸಿದ್ದರು ಎಂದು ಅಂತಿಮವಾಗಿ ತಿಳಿದುಬಂದಿದೆ.