ನವದೆಹಲಿ:"ಭಾರತ ಹಳೆಯ ಮತ್ತು ನಂಬಿಕಸ್ಥ ನೆರೆಹೊರೆಯ ದೇಶ. ಅದರೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳಬೇಕೇ ಹೊರತು, ವಿರುದ್ಧ ಹೋಗುವ ಕಾಲ ಇದಲ್ಲ. ಮಾಲ್ಡೀವ್ಸ್ ಸರ್ಕಾರ ಮೂರ್ಖತನದ ಹೆಜ್ಜೆ ಇಡುತ್ತಿದೆ" ಎಂದು ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಹೇಳಿದ್ದಾರೆ.
"ಅಧ್ಯಕ್ಷ ಮೊಹಮದ್ ಮುಯಿಝು ರಾಜಕೀಯ ವಿರೋಧಕ್ಕಾಗಿ ಚೀನಾದ ಬಲೆಗೆ ಬೀಳುತ್ತಿದ್ದಾರೆ. ಮುಂದೊಂದು ದಿನ ಶ್ರೀಲಂಕಾದಂತೆ ಮಾಲ್ಡೀವ್ಸ್ ಕೂಡ ಚೀನಾ ಕೈಗೊಂಬೆಯಾಗಲಿದೆ. ಈಗಾಗಲೇ ದೇಶದ ಸಾಲ ವಿಪರೀತವಾಗಿದೆ. ಅದನ್ನು ಮುಯಿಝು ಸರ್ಕಾರ ತೀರಿಸುವ ಯತ್ನ ಮಾಡಬೇಕೇ ಹೊರತು ಬಲಿಷ್ಠ ರಾಷ್ಟ್ರಗಳ ಜೊತೆ ಕದನಕ್ಕಿಳಿಯುವುದಲ್ಲ" ಎಂದು ಅವರು ಬುದ್ಧಿವಾದ ಹೇಳಿದರು.
ಭಾರತದೊಂದಿಗೆ ವಿರೋಧ ಮೂರ್ಖತನ:"ಭಾರತ ನೆರೆಯ ರಾಷ್ಟ್ರ. ಅದರ ಜೊತೆಗಿನ ಸಾಂಪ್ರದಾಯಿಕ ಸಂಬಂಧವನ್ನು ಉಳಿಸಿಕೊಳ್ಳುವುದು ಅಗತ್ಯ. ಇದಕ್ಕೆ ಮಿಗಿಲಾಗಿ ಭಾರತದ ವಿರುದ್ಧ ಹೋಗುವುದು ಸಂಪೂರ್ಣ ಮೂರ್ಖತನವಾಗಿದೆ. ರಾಜಕೀಯ ವಿಚಾರಗಳಿಗಾಗಿ ಅಧ್ಯಕ್ಷರು ಮಾಲ್ಡೀವ್ಸ್ ಅನ್ನು ಭಾರತದ ವಿರುದ್ಧ ನಿಲ್ಲಿಸುತ್ತಿದ್ದಾರೆ. ಇದು ದುರದೃಷ್ಟಕರ. ಮಾಲೆಗೆ ಎಂದಿಗಿಂತಲೂ ಈಗ ಭಾರತದ ನೆರವಿನ ಅಗತ್ಯವಿದೆ" ಎಂದು ಅವರು ಅಭಿಪ್ರಾಯಪಟ್ಟರು.
"ಕೋವಿಡ್ ನಂತರ, ಚೀನಾ ಇನ್ನೂ ಚೇತರಿಸಿಕೊಂಡಿಲ್ಲ. ಮಾಲ್ಡೀವ್ಸ್ಗೆ ಚೀನಾದಿಂದ ಬರುವ ಪ್ರವಾಸಿಗರೂ ಕಡಿಮೆಯೇ. ಹೀಗಿದ್ದಾಗ, ಮುಯಿಝು ತನ್ನ ನೀತಿಯನ್ನು ಭಾರತದ ವಿರುದ್ಧ ಚಲಾಯಿಸುತ್ತಿದ್ದಾರೆ. ಪಕ್ಷದಲ್ಲಿನ ಕೆಲವರನ್ನು ಸಮಾಧಾನಪಡಿಸಲು ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರ ದೇಶಕ್ಕೆ ಅಪಾಯ" ಎಂದು ಅದೀಮ್ ಎಚ್ಚರಿಸಿದ್ದಾರೆ.