ಕೈರೋ (ಈಜಿಪ್ಟ್):ಉತ್ತರ ಆಫ್ರಿಕಾದ ದೇಶ ಲಿಬಿಯಾದ ಪೂರ್ವಭಾಗಗಳಲ್ಲಿ ಭೀಕರ ಪ್ರವಾಹದ ಅಬ್ಬರಕ್ಕೆ ಸಿಲುಕಿ ಸುಮಾರು 5,000ಕ್ಕೆ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಸಾವಿರಾರು ನಿವಾಸಿಗಳು ನಾಪತ್ತೆಯಾಗಿದ್ದಾರೆ. ಕರಾವಳಿ ಪಟ್ಟಣಗಳಲ್ಲಿ ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಮೆಡಿಟರೇನಿಯನ್ ಚಂಡಮಾರುತ ಡೇನಿಯನ್‌ನಿಂದಾಗಿ ಭೀಕರ ಪ್ರವಾಹ ಉಂಟಾಗಿದೆ.
ಲಿಬಿಯಾದ ಪೂರ್ವ ನಗರವಾದ ಡರ್ನಾದಲ್ಲಿ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದರವ ಅವಶೇಷಗಳನ್ನು ಅಗೆದು ಹೊರ ತೆಗೆಯಲಾಗುತ್ತಿದೆ. ರಕ್ಷಣಾ ಪಡೆ ಸಿಬ್ಬಂದಿ ನೂರಾರು ಶವಗಳನ್ನು ಹೊರತೆಗೆದಿದ್ದಾರೆ. ಪ್ರವಾಹದ ನೀರು ಅಣೆಕಟ್ಟೆಯನ್ನು ಧ್ವಂಸ ಮಾಡಿದ್ದು, ಈ ಮಹಾ ದುರಂತದಲ್ಲಿ ಸುಮಾರು 10,000 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಹೊರ ತೆಗೆಯಲಾದ ಕನಿಷ್ಠ 700 ಶವಗಳನ್ನು ಇಲ್ಲಿಯವರೆಗೆ ಸಮಾಧಿ ಮಾಡಲಾಗಿದೆ ಎಂದು ಪೂರ್ವ ಲಿಬಿಯಾದ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಡರ್ನಾ ಆಂಬ್ಯುಲೆನ್ಸ್ ಪ್ರಾಧಿಕಾರವು ಪ್ರಸ್ತುತ ಸಾವಿನ ಸಂಖ್ಯೆಯನ್ನು 5000ಕ್ಕೂ ಹೆಚ್ಚು ಎಂದು ಹೇಳಿದೆ.
ಆದರೆ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟೀಸ್‌ನ ಲಿಬಿಯಾ ರಾಯಭಾರಿ ತಮೆರ್ ರಂಜಾನ್ ಹೇಳಿದ್ದಾರೆ. ಕನಿಷ್ಠ 10,000 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ಅವರು ಟುನೀಶಿಯಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡಿದ್ದಾರೆ. ಲಿಬಿಯಾದಲ್ಲಿನ ಪರಿಸ್ಥಿತಿಯು ಮೊರಾಕೊದಲ್ಲಿನ ಪರಿಸ್ಥಿತಿಯಂತೆ ವಿನಾಶಕಾರಿಯಾಗಿದೆ ಎಂದು ರಂಜಾನ್ ಹೇಳಿದ್ದಾರೆ.