ನ್ಯೂಯಾರ್ಕ್ (ಅಮೆರಿಕ) :ಹಮಾಸ್ ವಿರುದ್ಧದ ಯುದ್ಧದಲ್ಲಿ ಭಾರತ, ಇಸ್ರೇಲ್ಗೆ ಬೆಂಬಲ ನೀಡಿದ್ದರೂ ಗಾಜಾಪಟ್ಟಿಯಲ್ಲಿ ನಾಗರಿಕರ ಪ್ರಾಣಹಾನಿಯನ್ನು ಬಲವಾಗಿ ಖಂಡಿಸಿದೆ. 'ಎರಡು ರಾಷ್ಟ್ರಗಳ ಯುದ್ಧವು ಅಮಾಯಕ ಜನರ ಬಲಿ ಪಡೆಯುತ್ತಿರುವುದನ್ನು ಒಪ್ಪಲಾಗದು' ಎಂದು ವಿಶ್ವಸಂಸ್ಥೆಗೆ ತಿಳಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ಜನರ ಸಾವಿಗೆ ಕಾರಣವಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ದೊಡ್ಡ ಪ್ರಮಾಣದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಆತಂಕಕಾರಿ, ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಭಾರತ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿರುವುದು ನಿಸ್ಸಂಶಯ. ಆದರೆ, ಸಂಘರ್ಷದಲ್ಲಿ ಅಮಾಯಕರ ಪ್ರಾಣ ಬಲಿಯಾಗುತ್ತಿರುವುದಕ್ಕೆ ನಮ್ಮ ಬೆಂಬಲವಿಲ್ಲ. ನಾವು ಇದನ್ನು ಖಂಡಿಸುತ್ತೇವೆ. ಇದು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಹೇಳಿದರು.
ಭಾರತದ ನಿಲುವು ಸ್ಪಷ್ಟ:ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ಗಾಜಾದಲ್ಲಿ ಮಾನವೀಯ ನೆರವನ್ನು ವಿಸ್ತರಿಸಲು ಭಾರತವು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ವಿಶ್ವಸಂಸ್ಥೆಗೆ ಮನವರಿಕೆ ಮಾಡಿಕೊಟ್ಟರು. ಭಾರತವು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಜಿ20, ಬ್ರಿಕ್ಸ್ ಮತ್ತು ಜಾಗತಿಕ ದಕ್ಷಿಣ ಶೃಂಗಸಭೆ ವೇದಿಕೆಗಳಲ್ಲಿ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಯುದ್ಧ ಪೀಡಿತ ಜನರಿಗೆ ಮಾನವೀಯ ನೆರವು ನೀಡಲು ಕರೆ ನೀಡಿದ್ದೇವೆ ಎಂದರು.