ವಾಷಿಂಗ್ಟನ್:ಎರಡು ವರ್ಷಗಳಿಂದ ಖಾಲಿಯಾಗಿದ್ದ ಭಾರತದಲ್ಲಿ ಅಮೆರಿಕದ ರಾಯಭಾರಿ ಹುದ್ದೆಗೆ ಎರಿಕ್ ಗಾರ್ಸೆಟ್ಟಿ ಅವರನ್ನು ನೇಮಿಸಲಾಗಿದೆ. ಪ್ರಮುಖ ರಾಜತಾಂತ್ರಿಕ ಹುದ್ದೆಗೆ ಅಧ್ಯಕ್ಷ ಜೋ ಬೈಡನ್ ಅವರ ಆಪ್ತ ಸಹಾಯಕನನ್ನು ಸೆನೆಟ್ ಬುಧವಾರ ಸೂಚಿಸಿತು. ಗಾರ್ಸೆಟ್ಟಿ ಅವರ ನಾಮನಿರ್ದೇಶನವನ್ನು ಅಮೆರಿಕದ ಸೆನೆಟ್ 52- 42 ಮತಗಳಿಂದ ಅನುಮೋದಿಸಿದೆ.
2021 ರಲ್ಲಿ ಎರಿಕ್ರನ್ನು ಭಾರತದಲ್ಲಿ ಅಮೆರಿಕದ ರಾಯಭಾಗಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದರು. ಆದರೆ, ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಅನುಮೋದನೆಗೊಂಡಿರಲಿಲ್ಲ. ಈ ವರ್ಷದ ಆರಂಭದಲ್ಲಿ ಮತ್ತೊಮ್ಮೆ ಬೈಡನ್ ಅವರು ಎರಿಕ್ರನ್ನು ಹುದ್ದೆಗೆ ಸೂಚಿಸಿದ್ದರು. ನಾಮನಿರ್ದೇಶನವನ್ನು ಮತಕ್ಕೆ ಹಾಕಲು ಅಮೆರಿಕ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಬಾಬ್ ಮೆನೆಂಡೆಝ್ ಅವರು ಫೆಬ್ರವರಿ 20 ಕ್ಕೆ ದಿನಾಂಕ ಗೊತ್ತು ಮಾಡಿದ್ದರು. ಆದರೆ, ಅದು ನಡೆಯದೇ ಇಲ್ಲಿಯವರೆಗೂ ಮುಂದೂಡಿಕೆಯಾಗಿತ್ತು.
ಬುಧವಾರ ನಡೆದ ಮತದಾನದಲ್ಲಿ ಎರಿಕ್ ಪರ 52 ಸೆನೆಟ್ ಸದಸ್ಯರು ಮತ ಹಾಕಿದರೆ, ಪ್ರತಿಸ್ಪರ್ಧಿಗೆ 42 ಮತಗಳು ಬಿದ್ದವು. 10 ಮತಗಳ ಅಂತರದಿಂದ ಎರಿಕ್ ಅವರು ಪರೀಕ್ಷೆಯನ್ನು ಗೆದ್ದರು. ಇದಕ್ಕೂ ಮೊದಲು, ವಿದೇಶಾಂಗ ವ್ಯವಹಾರಗಳ ಸಮಿತಿಯು ಎರಿಕ್ ಪರವಾಗಿ ಮತ ಚಲಾಯಿಸಿದ್ದರು. ಸಮಿತಿಯು 13-8 ಮತಗಳಿಂದ ನಾಮನಿರ್ದೇಶನ ಅನುಮೋದಿಸಿತ್ತು.
ಯಾರು ಎರಿಕ್?:ಅಧ್ಯಕ್ಷ ಜೋ ಬೈಡನ್ ಅವರ ಆಪ್ತ ಸಹಾಯಕರಾಗಿದ್ದ ಎರಿಕ್ ಗಾರ್ಸೆಟ್ಟಿ ಅವರು ಲೈಂಗಿಕ ದೌರ್ಜನ್ಯ ಆರೋಪಗಳನ್ನೂ ಎದುರಿಸುತ್ತಿದ್ದಾರೆ. ಹೀಗಾಗಿ ಅಧ್ಯಕ್ಷರೇ ಸೂಚಿಸಿದಾಗ್ಯೂ ಅವರು ರಾಯಭಾರಿಯಾಗಿ ಆಯ್ಕೆಯಾಗಿರಲಿಲ್ಲ. ಆಡಳಿತಾರೂಢ ಡೆಮಾಕ್ರೆಟಿಕ್ ಪಕ್ಷದವರೇ ಎರಿಕ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಮತ ಹಾಕುವ ವೇಳೆಯೂ ಕೆಲವರು ಎರಿಕ್ ವಿರುದ್ಧವಾಗಿ ಮತ ಚಲಾವಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.