ಕರ್ನಾಟಕ

karnataka

ETV Bharat / international

ಲಿಬಿಯಾ ಪ್ರವಾಹ: ಡೆರ್ನಾ ನಗರದಲ್ಲಿ 5300ಕ್ಕೂ ಹೆಚ್ಚು ಮಂದಿ ಸಾವು, 30 ಸಾವಿರ ಜನ ನಿರಾಶ್ರಿತ - ಕೊಚ್ಚಿ ಹೋದ ಡೆರ್ನಾ ನಗರ

ಪೂರ್ವ ಲಿಬಿಯಾದಲ್ಲಿ ಭೀಕರ ಪ್ರವಾಹಕ್ಕೆ ಡೆರ್ನಾ ನಗರವೇ ಕೊಚ್ಚಿಕೊಂಡು ಹೋಗಿದೆ. ಅಣೆಕಟ್ಟೆಗಳು ಒಡೆದು 7 ಮೀಟರ್​ ಎತ್ತರದಲ್ಲಿ ನೀರಿನ ಅಲೆಗಳು ನಗರವನ್ನು ನುಗ್ಗಿ ನರಕ ಸೃಷ್ಟಿಸಿವೆ.

libya flood
ಲಿಬಿಯಾ ಪ್ರವಾಹ

By PTI

Published : Sep 13, 2023, 5:50 PM IST

Updated : Sep 13, 2023, 6:27 PM IST

ಡೆರ್ನಾ (ಲಿಬಿಯಾ) :ಮಹಾಮಳೆಗೆ ಎರಡು ಅಣೆಕಟ್ಟೆಗಳು ಒಡೆದು ಲಿಬಿಯಾವನ್ನು ಮುಳುಗಿಸಿರುವ ಪ್ರವಾಹವು 5300 ಕ್ಕೂ ಜನರನ್ನು ಬಲಿ ಪಡೆದಿದೆ. ದುರಂತದಲ್ಲಿ 30 ಸಾವಿರ ಜನರನ್ನು ಪ್ರವಾಹ ಒಕ್ಕಲೆಬ್ಬಿಸಿದೆ. ಈವರೆಗೂ 2 ಸಾವಿರ ಶವಗಳನ್ನು ಪತ್ತೆ ಮಾಡಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಪೂರ್ವ ಲಿಬಿಯಾದ ನಗರವಾದ ಡೆರ್ನಾಕ್ಕೆ ಅಪ್ಪಳಿಸಿದ ಪ್ರವಾಹದಿಂದ ಸತ್ತವರ ಸಂಖ್ಯೆ 5300 ಎಂದು ಸರ್ಕಾರದ ಅಂಕಿ - ಅಂಶಗಳು ಹೇಳುತ್ತಿದ್ದರೆ, 6 ಸಾವಿರಕ್ಕಿಂತ ಹೆಚ್ಚಾಗಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಕರಾವಳಿ ಪ್ರದೇಶದ ನಗರದಲ್ಲಾದ ಅನಾಹುತದಲ್ಲಿ ಸಿಲುಕಿದವರ ನೆರವಿಗೆ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವ ಸಾಧ್ಯತೆ ಇದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಬುಧವಾರ ಮಾಹಿತಿ ಹಂಚಿಕೊಂಡಿದ್ದಾರೆ.

ಭಾನುವಾರ ರಾತ್ರಿ ಹಠಾತ್ ಆಗಿ ಉಂಟಾದ ಪ್ರವಾಹದಿಂದಾಗಿ ಎರಡು ಅಣೆಕಟ್ಟೆಗಳು ಒಡೆದು ಹೋಗಿವೆ. ಇಡೀ ಡೆರ್ನಾ ನಗರವೇ ನೀರಿನಲ್ಲಿ ಮುಳುಗಿದೆ. ರಕ್ಷಣಾ ಕಾರ್ಯಾಚರಣೆಗೆ ಭಾರೀ ಅಡ್ಡಿ ಉಂಟಾಗಿದೆ. ಕಟ್ಟಡಗಳು, ಅವಶೇಷಗಳ ಕೆಳಗೆ ಜನರು ಸಿಲುಕಿರುವ ಮತ್ತು ಶವಗಳನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಎಲ್ಲಿ ನೋಡಿದಲ್ಲಿ ಶವಗಳ ರಾಶಿ:ಡೆರ್ನಾ ನಗರವನ್ನು ಛಿದ್ರ ಮಾಡಿರುವ ಪ್ರವಾಹದಿಂದಾಗಿ ಎಲ್ಲಿ ನೋಡಿದರಲ್ಲಿ ಶವಗಳು ಕಂಡು ಬರುತ್ತಿವೆ. ಮನೆಗಳ ಒಳಗೆ, ಬೀದಿಗಳಲ್ಲಿ, ಸಮುದ್ರದ ನೀರಿನಲ್ಲಿ ಹೆಣಗಳು ಬಿದ್ದಿವೆ. ಮಕ್ಕಳು, ಪುರುಷರು, ಮಹಿಳೆಯರು ಇದ್ದಾರೆ. ಇದೊಂದು ಅತಿ ಭೀಕರ ದುರಂತವಾಗಿದೆ. ಮೆಡಿಟರೇನಿಯನ್ ಸಮುದ್ರದಲ್ಲಿ ಉಂಟಾದ ಡೇನಿಯಲ್ ಚಂಡಮಾರುತ ಪೂರ್ವ ಲಿಬಿಯಾದ ಅನೇಕ ಪಟ್ಟಣಗಳಲ್ಲಿ ಮಾರಣಾಂತಿಕ ಪ್ರವಾಹವನ್ನು ಉಂಟುಮಾಡಿದೆ. ಅದರಲ್ಲೂ ನದಿ ಪಾತ್ರದಲ್ಲಿರುವ ಡೆರ್ನಾ ಅತಿ ಹೆಚ್ಚಾಗಿ ಹಾನಿಗೀಡಾಗಿದೆ.

7 ಮೀಟರ್​ ಎತ್ತರದ ಅಲೆ:ಸೋಮವಾರ ರಾತ್ರಿ ಚಂಡಮಾರುತದಿಂದಾಗಿ ಎರಡು ಅಣೆಕಟ್ಟೆಗಳು ದೊಡ್ಡ ಸದ್ದಿನೊಂದಿಗೆ ಒಡೆದು ಹೋದವು. ರಾತ್ರಿಯಲ್ಲಿ ಅದರ ಸದ್ದು ದೊಡ್ಡದಾಗಿ ಕೇಳಿಬಂತು. ನಗರಕ್ಕೆ ನೀರು ನುಗ್ಗಿದಾಗ ಅದರ ಅಲೆಗಳು 7 ಮೀಟರ್ ಎತ್ತರ ಇದ್ದವು. ನೋಡನೋಡುತ್ತಿದ್ದಂತೆ ನಗರವನ್ನು ನೀರು ಕೊಚ್ಚಿಕೊಂಡು ಹೋಯಿತು ಎಂದು ಸ್ಥಳೀಯರು ತಿಳಿಸಿದರು.

ಡೆರ್ನಾ ನಗರವೊಂದರಲ್ಲೇ ಸದ್ಯಕ್ಕೆ 5000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಜೊತೆಗೆ 7 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಪೂರ್ವ ಲಿಬಿಯಾದ ಇತರೆಡೆ ಸುಮಾರು 100 ಸಾವುಗಳು ದಾಖಲಾಗಿವೆ. ಗಾಯಾಳುಗಳನ್ನು ರಕ್ಷಿಸಿ, ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

30 ಸಾವಿರ ಜನರಿಗೆ ತೊಂದರೆ:ಚಂಡಮಾರುತ ಸೃಷ್ಟಿಸಿದ ಭೀಕರ ಪ್ರವಾಹದಿಂದಾಗಿ ಡೆರ್ನಾ ನಗರ ಸಂಪೂರ್ಣವಾಗಿ ಛಿದ್ರವಾಗಿದೆ. ಇಲ್ಲಿನ 30 ಸಾವಿರ ಜನರು ನಿರಾಶ್ರಿತರಾಗಿದ್ದಾರೆ. ಮನೆ, ಕುಟುಂಬ, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸಿಗರ ವಿಭಾಗ ಅಂದಾಜಿಸಿದೆ.

ಇದನ್ನೂ ಓದಿ:ಭೀಕರ ಪ್ರವಾಹಕ್ಕೆ ಪೂರ್ವ ಲಿಬಿಯಾ ತತ್ತರ: 5 ಸಾವಿರಕ್ಕೂ ಹೆಚ್ಚು ಜನ ಸಾವು, 10 ಸಾವಿರ ಮಂದಿ ನಾಪತ್ತೆ

Last Updated : Sep 13, 2023, 6:27 PM IST

ABOUT THE AUTHOR

...view details