ವಿಶ್ವಸಂಸ್ಥೆ: ಇಸ್ರೇಲ್-ಹಮಾಸ್ ಯುದ್ಧದಿಂದ ಗಾಝಾದಲ್ಲಿ ಹೆಚ್ಚುತ್ತಿರುವ ಸಾವುಗಳಿಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಗಾಝಾದಲ್ಲಿ ಮಾನವೀಯ ಕದನ ವಿರಾಮಕ್ಕೆ ತಮ್ಮ ಕರೆಯನ್ನು ಪುನರುಚ್ಚರಿಸಿದ್ದಾರೆ. "ಈ ಯುದ್ಧವು ಪ್ರತಿದಿನ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ನಾಗರಿಕರ ಸಾವಿಗೆ ಕಾರಣವಾಗುತ್ತಿದೆ. ಇದು ನಿಲ್ಲಬೇಕು. ತಕ್ಷಣದ ಮಾನವೀಯ ಕದನ ವಿರಾಮಕ್ಕೆ ನನ್ನ ಕರೆಯನ್ನು ನಾನು ಪುನರುಚ್ಚರಿಸುತ್ತೇನೆ" ಎಂದು ಅವರು ಹೇಳಿದರು. ಅಕ್ಟೋಬರ್ 7 ರಿಂದ, ಗಾಝಾದ ಯುದ್ಧಪೀಡಿತ ಪ್ರದೇಶದಲ್ಲಿ 11,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇಸ್ರೇಲ್ ಸೈನಿಕರಿಂದ ಸುತ್ತುವರಿಯಲ್ಪಟ್ಟ ಅಲ್-ಶಿಫಾ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ 31 ಶಿಶುಗಳನ್ನು ಸ್ಥಳಾಂತರಿಸಲು ವಿಶ್ವ ಆರೋಗ್ಯ ಸಂಸ್ಥೆ ಸಹಾಯ ಮಾಡಿದೆ. ಏತನ್ಮಧ್ಯೆ ಸಾವುನೋವುಗಳ ಹೆಚ್ಚಳ, ಯುಎನ್ ಕಾರ್ಮಿಕನ ಸಾವು ಸೇರಿದಂತೆ ಶಾಲೆಗಳು ಮತ್ತು ಆಶ್ರಯ ತಾಣಗಳ ಮೇಲಿನ ದಾಳಿಗಳು ಮತ್ತು ಇಂಧನ ಕೊರತೆಯು ವಾರಾಂತ್ಯದಲ್ಲಿ ಗಾಝಾದಾದ್ಯಂತ ಆತಂಕ ಮೂಡಿಸಿದೆ.
"ಗಾಝಾದಲ್ಲಿ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡು ಯುಎನ್ಆರ್ಡಬ್ಲ್ಯೂಎ (ಯುಎನ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಫಾರ್ ಪ್ಯಾಲೆಸ್ಟೈನ್ ರೆಫ್ಯೂಜೀಸ್ ಇನ್ ದಿ ನಿಯರ್ ಈಸ್ಟ್) ಶಾಲೆಗಳ ಮೇಲೆ ದಾಳಿ ನಡೆಸಿರುವುದು ನನಗೆ ತೀವ್ರ ಆಘಾತ ತಂದಿದೆ. ವಿಶ್ವಸಂಸ್ಥೆಯ ಆವರಣದಲ್ಲಿ ಸುರಕ್ಷತೆ ಬಯಸುತ್ತಿದ್ದ ಡಜನ್ಗಟ್ಟಲೆ ಜನರು, ಅದರಲ್ಲೂ ಪ್ರಮುಖವಾಗಿ ಅನೇಕ ಮಹಿಳೆಯರು ಮತ್ತು ಮಕ್ಕಳು ಕೊಲ್ಲಲ್ಪಟ್ಟರು ಮತ್ತು ಗಾಯಗೊಂಡರು" ಎಂದು ಯುಎನ್ ಪ್ರಧಾನ ಕಾರ್ಯದರ್ಶಿ ಹೇಳಿದರು.