ವಾಷಿಂಗ್ಟನ್:ಐತಿಹಾಸಿಕ ಹಿನ್ನೆಲೆ ಇರುವ ಬೆಳಕಿನ ಹಬ್ಬ ದೀಪಾವಳಿಗೆ ಭಾರತದಲ್ಲಿ ಸಾರ್ವತ್ರಿಕ ರಜೆ ಇದೆ. ಅದೇ ರೀತಿ ಅಮೆರಿಕದಲ್ಲೂ ಆ ದಿನಕ್ಕೆ ರಜೆ ಘೋಷಿಸಬೇಕು ಎಂದು ಸಂಸದೆಯೊಬ್ಬರು ಸಂಸತ್ತಿನಲ್ಲಿ ಮಸೂದೆ ಮಂಡಿಸಿದ್ದಾರೆ. ಇದನ್ನು ದೇಶಾದ್ಯಂತ ಇರುವ ವಿವಿಧ ಸಮುದಾಯಗಳು ಸ್ವಾಗತಿಸಿವೆ. ಅಮೆರಿಕಾದಲ್ಲಿ ಇದು ಕಾನೂನಾಗಿ ಜಾರಿಗೆ ಬಂದಲ್ಲಿ ಮಾನ್ಯತೆ ಪಡೆದ 12ನೇ ರಜಾ ದಿನವಾಗಲಿದೆ.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಸೂದೆ ಮಂಡಿಸಿದ ಸಂಸದೆ ಗ್ರೇಸ್ಡ್ ಮೆಂಗ್ ಅವರು, ದೀಪಾವಳಿಯು ಪ್ರಪಂಚದಾದ್ಯಂತ ಕೋಟ್ಯಂತರ ಜನರು ಆಚರಿಸುವ ಹಬ್ಬವಾಗಿದೆ. ಕ್ವೀನ್ಸ್, ನ್ಯೂಯಾರ್ಕ್ ಸೇರಿದಂತೆ ಅಮೆರಿಕದಲ್ಲಿ ಅಸಂಖ್ಯಾತ ಕುಟುಂಬಗಳು ಮತ್ತು ಸಮುದಾಯಗಳಿಗೆ ಇದು ವರ್ಷದ ಪ್ರಮುಖ ದಿನಗಳಲ್ಲಿ ಒಂದಾಗಿದೆ. ಹೀಗಾಗಿ ಆ ದಿನಕ್ಕೆ ಸಾರ್ವತ್ರಿಕ ರಜೆ ನೀಡಬೇಕು ಎಂದು ಮಸೂದೆಯಲ್ಲಿ ಬೇಡಿಕೆ ಮಂಡಿಸಿದ್ದಾರೆ.
ದೀಪಾವಳಿಗೆ ಸಾರ್ವತ್ರಿಕ ರಜೆ ನೀಡುವುದರಿಂದ ಕುಟುಂಬಸ್ಥರು ಮತ್ತು ಸ್ನೇಹಿತರು ಒಟ್ಟಿಗೆ ಹಬ್ಬದ ಆಚರಣೆ ಮಾಡಲು ಅನುವು ಮಾಡಿಕೊಡುತ್ತದೆ. ವೈವಿಧ್ಯಮಯ ಸಂಸ್ಕೃತಿಯನ್ನು ಸರ್ಕಾರವು ಗೌರವಿಸಿದಂತಾಗುತ್ತದೆ ಎಂದು ಗ್ರೇಸ್ಡ್ ಮೆಂಗ್ ಅಭಿಪ್ರಾಯಪಟ್ಟಿದ್ದಾರೆ.
ದೀಪಾವಳಿ ಆಚರಣೆ ಅಮೆರಿಕದಲ್ಲಿ ಅದ್ಭುತ ಸಮಯವಾಗಿದೆ. ಪ್ರತಿ ವರ್ಷವೂ ಈ ದಿನ ಅದೆಷ್ಟೋ ಜನರಿಗೆ ಮಹತ್ವದ್ದಾಗಿದೆ. ರಾಷ್ಟ್ರ ನಿರ್ಮಾಣಕ್ಕಾಗಿ ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಸಮುದಾಯಗಳು ಶಕ್ತಿ ನೀಡಿವೆ. ದೀಪಾವಳಿ ದಿನದ ರಜಾ ದಿನಕ್ಕಾಗಿ ಮಂಡಿಸುತ್ತಿರುವ ಮಸೂದೆಯು ಎಲ್ಲಾ ಅಮೆರಿಕನ್ನರಿಗೆ ಈ ದಿನದ ಪ್ರಾಮುಖ್ಯತೆಯ ಬಗ್ಗೆ ಶಿಕ್ಷಣ ನೀಡುವ ಒಂದು ಹೆಜ್ಜೆಯಾಗಿದೆ. ಇದನ್ನು ಸಂಸತ್ತಿನ ಮೂಲಕ ಅಧಿಕೃತಗೊಳಿಸುವ ಕಾಲವನ್ನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.