ನವದೆಹಲಿ/ ಕೀವ್ : ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಲ್ಲಿರುವ ಭಾರತೀಯರಿಗೆ ಶೀಘ್ರವಾಗಿ ದೇಶ ತೊರೆಯುವಂತೆ ಮತ್ತೊಮ್ಮೆ ಮನವಿ ಜತೆ ಸೂಚನೆಯನ್ನೂ ನೀಡಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಹಗೆತನದ ದೃಷ್ಟಿಯಿಂದ ರಾಯಭಾರ ಕಚೇರಿ ಈ ಸಲಹೆಯನ್ನು ನೀಡಿದೆ. ಉಕ್ರೇನ್‌ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟ ನಂತರ ಈ ಸಲಹೆ ನೀಡಲಾಗಿದೆ.
ಅಕ್ಟೋಬರ್ 19 ರಂದು ರಾಯಭಾರ ಕಚೇರಿ ಹೊರಡಿಸಿ ಸೂಚನೆಯನ್ನೇ ಮತ್ತೆ ಪುನರುಚ್ಚರಿಸಿದೆ. ಲಭ್ಯವಿರುವ ವಿಧಾನಗಳ ಮೂಲಕ ತಕ್ಷಣವೇ ಉಕ್ರೇನ್ ತೊರೆಯುವಂತೆ ಸೂಚಿಸಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಹಿಂದಿನ ಸಲಹೆಯನ್ನು ಅನುಸರಿಸಿ ಕೆಲವು ಭಾರತೀಯ ಪ್ರಜೆಗಳು ಉಕ್ರೇನ್ ತೊರೆದಿದ್ದಾರೆ. ದೇಶವನ್ನು ತೊರೆಯಲು ಭಾರತೀಯರಿಗೆ ರಾಯಭಾರ ಕಚೇರಿಯಿಂದ ಸಹಕಾರ ದೊರೆಯಲಿದೆ ಎಂದು ಹೇಳಲಾಗಿದೆ.
ಉಕ್ರೇನ್ನನ್ನು ವಶಪಡಿಸಿಕೊಳ್ಳುವುದಕ್ಕಾಗಿ 'ಅಣ್ವಸ್ತ್ರ' ಬಳಸುವುದಾಗಿ ರಷ್ಯಾ ಎಚ್ಚರಿಕೆ ನೀಡಿದ ಬೆನ್ನೆಲ್ಲೇ ಈ ಸಲಹೆಯನ್ನು ನೀಡಲಾಗಿದೆ. ಭಾರತೀಯ ನಾಗರಿಕರು ಗಡಿಗೆ ಪ್ರಯಾಣಿಸಲು ಬೇಕಾಗುವ ಯಾವುದೇ ಸಹಾಯಕ್ಕಾಗಿ ಸಂಪರ್ಕಿಸಬಹುದಾದ ಕೆಲವು ಸಂಖ್ಯೆಗಳನ್ನು ರಾಯಭಾರ ಕಚೇರಿ ಹಂಚಿಕೊಂಡಿದೆ.