ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನದಲ್ಲಿ ಗ್ರಾಹಕ ಬಳಕೆ ವಸ್ತುಗಳ ಬೆಲೆಯೇರಿಕೆಯು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಈ ಏಪ್ರಿಲ್‌ನಲ್ಲಿ ಶೇ 36.4 ರಷ್ಟು ಹೆಚ್ಚಾಗಿದ್ದು, ಇದು 1964ರ ನಂತರ ದೇಶ ಕಂಡ ಅತ್ಯಧಿಕ ಹಣದುಬ್ಬರವಾಗಿದೆ. ಈ ಮೂಲಕ ಪಾಕಿಸ್ತಾನವು ಈ ವಿಷಯದಲ್ಲಿ ಶ್ರೀಲಂಕಾವನ್ನು ಹಿಮ್ಮೆಟ್ಟಿಸಿ ಏಷ್ಯಾದ ಅತಿವೇಗದ ಹಣದುಬ್ಬರ ಏರಿಕೆ ದಾಖಲಿಸಿದ ರಾಷ್ಟ್ರವೆಂಬ ಕುಖ್ಯಾತಿಗೆ ಈಗ ಪಾತ್ರವಾಗಿದೆ. 2023 ರಲ್ಲಿ ಈವರೆಗೆ ಪಾಕಿಸ್ತಾನ ಕರೆನ್ಸಿಯು ಅತಿ ಹೆಚ್ಚು ಮೌಲ್ಯ ಕಳೆದುಕೊಂಡ ಕರೆನ್ಸಿಯಾಗಿದೆ. ಈ ವರ್ಷದಲ್ಲಿ ಡಾಲರ್ ಎದುರು ಪಾಕಿಸ್ತಾನ ರೂಪಾಯಿ ಶೇ 20 ರಷ್ಟು ಮೌಲ್ಯ ಕಳೆದುಕೊಂಡಿದ್ದು, ಇದರಿಂದ ಆಮದು ವಸ್ತುಗಳು ದೇಶದಲ್ಲಿ ಮತ್ತಷ್ಟು ತುಟ್ಟಿಯಾಗಿವೆ.
ಏಪ್ರಿಲ್‌ನಲ್ಲಿ ಸಾರಿಗೆ ವೆಚ್ಚಗಳು ಶೇ 56.8 ರಷ್ಟು, ಆಹಾರ ಹಣದುಬ್ಬರ ಶೇ 48.1 ರಷ್ಟು ಏರಿಕೆಯಾಗಿವೆ ಎಂದು ಡೇಟಾ ತೋರಿಸಿದೆ. ಬಟ್ಟೆ ಮತ್ತು ಪಾದರಕ್ಷೆಗಳ ಬೆಲೆಗಳು ಶೇ 21.6 ರಷ್ಟು ಮತ್ತು ಮತ್ತು ವಸತಿ, ನೀರು ಮತ್ತು ವಿದ್ಯುತ್ ವೆಚ್ಚಗಳು ಶೇ 16.9 ರಷ್ಟು ಏರಿಕೆಯಾಗಿವೆ. 6.5 ಶತಕೋಟಿ ಡಾಲರ್ ಮೊತ್ತದ ಸಾಲ ಕಾರ್ಯಕ್ರಮದ ಪುನರುಜ್ಜೀವನಕ್ಕಾಗಿ IMF ನ ಷರತ್ತುಗಳನ್ನು ಪೂರೈಸಲು ಸರ್ಕಾರವು ತೆರಿಗೆಗಳು ಮತ್ತು ಇಂಧನ ಬೆಲೆಗಳನ್ನು ಹೆಚ್ಚಿಸಿದ ನಂತರ ಪಾಕಿಸ್ತಾನದಲ್ಲಿ ಹಣದುಬ್ಬರವು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಆಹಾರ ಮತ್ತು ಇಂಧನದಂತಹ ಅಗತ್ಯ ಆಮದುಗಳಿಗೆ ಹಣ ಪಾವತಿಸಲು ಮತ್ತು ಮುಂಬರುವ ತಿಂಗಳುಗಳಲ್ಲಿ ಸಾಲದ ಕಂತಿನ ಡೀಫಾಲ್ಟ್ ತಪ್ಪಿಸಲು ಪಾಕಿಸ್ತಾನಕ್ಕೆ ಬೇಲ್ಔಟ್ ನಿಧಿಗಳು ನಿರ್ಣಾಯಕವಾಗಿವೆ. ಆದಾಗ್ಯೂ ಐಎಂಎಫ್ ಹೊಸ ಹಣಕಾಸು ಸಹಾಯವನ್ನು ಮರುಪ್ರಾರಂಭಿಸುವ ಮೊದಲು ಆರ್ಥಿಕತೆಯಲ್ಲಿ ಬದಲಾವಣೆ ಮಾಡುವಂತೆ ಷರತ್ತುಗಳನ್ನು ಹಾಕಿದೆ. ಬೆಲೆಯೇರಿಕೆಯ ಒತ್ತಡವನ್ನು ನಿಯಂತ್ರಿಸಲು, ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನವು ತನ್ನ ಬೆಂಚ್ಮಾರ್ಕ್ ಬಡ್ಡಿ ದರವನ್ನು ಕಳೆದ ತಿಂಗಳು ಶೇ 21 ಕ್ಕೆ ಹೆಚ್ಚಿಸಿದೆ. ಇದು 1956 ರಿಂದ ಅತ್ಯಧಿಕವಾಗಿದೆ. ಏರುತ್ತಿರುವ ಹಣದುಬ್ಬರವು ಸಾಲದ ವೆಚ್ಚವನ್ನು ಸಹ ಹೆಚ್ಚಿಸಬಹುದು. ಕಳೆದ ವರ್ಷ ದೇಶದಲ್ಲಿ ಸಂಭವಿಸಿದ ಭಾರಿ ಪ್ರವಾಹದ ಹೊಡೆತದಿಂದ ಪಾಕಿಸ್ತಾನ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆಗಲೇ ಹಣದುಬ್ಬರದ ಹೊಡೆತ ಬಿದ್ದಿರುವುದು ಗಮನಾರ್ಹ.