ಕೊಲಂಬೊ(ಶ್ರೀಲಂಕಾ): ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಕಳೆದ ಕೆಲ ದಿನಗಳ ಹಿಂದೆ ಜನರು ದಂಗೆ ಎದಿದ್ದರು. ಈ ವೇಳೆ, ದೇಶ ಬಿಟ್ಟು ಪರಾರಿಯಾಗಿದ್ದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಇಂದು ತವರಿಗೆ ವಾಪಸ್ ಆಗಿದ್ದಾರೆ. ಇಂದು ನಸುಕಿನ ಜಾವ ಥಾಯ್ಲೆಂಡ್ನಿಂದ ಸ್ವದೇಶಕ್ಕೆ ಮರಳಿದ್ದಾರೆಂದು ಖಚಿತ ಮೂಲಗಳು ಮಾಹಿತಿ ಹಂಚಿಕೊಂಡಿವೆ.
ಆರ್ಥಿಕ ಬಿಕ್ಕಟ್ಟಿನಿಂದಾಗಿ ತತ್ತರಿಸಿ ಹೋಗಿದ್ದ ಜನರು ಕಳೆದ ಜುಲೈ 9ರಂದು ಕೊಲಂಬೊದಲ್ಲಿರುವ ರಾಜಪಕ್ಸ ಅವರ ಭವನ ಸೇರಿದಂತೆ ಅನೇಕ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದರು. ಹೀಗಾಗಿ, ಜುಲೈ 13ರಂದು ಗೊಟಬಯ ಶ್ರೀಲಂಕಾದಿಂದ ಪಲಾಯನ ಮಾಡಿದ್ದರು. ಸುಮಾರು ಎರಡು ತಿಂಗಳ ನಂತರ ಥಾಯ್ಲೆಂಡ್ನಿಂದ ದೇಶಕ್ಕೆ ವಾಪಸ್ ಆಗಿದ್ದಾರೆ.
ಭಾರೀ ಭದ್ರತೆಯ ನಡುವೆ ರಾಜಪಕ್ಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಶ್ರೀಲಂಕಾದಲ್ಲಿ ಆಡಳಿತ ನಡೆಸುತ್ತಿರುವ ಎಸ್ಎಲ್ಪಿಪಿ ಪಕ್ಷದ ಸಚಿವರು, ಸಂಸದರು ಅವರನ್ನು ಬರಮಾಡಿಕೊಂಡರು. ಇದಾದ ಬಳಿಕ ಬೃಹತ್ ಸುರಕ್ಷತೆಯಲ್ಲಿ ಅವರು ತಮ್ಮ ನಿವಾಸಕ್ಕೆ ತೆರಳಿದ್ದಾರೆ.