ಕೀನ್ಯಾ:ಬ್ಯಾಂಕ್‌ಗಳ ಬಡ್ಡಿಗೂ ಸಾಲ ಮಾಡಿ ಬದುಕು ಸಾಗಿಸುತ್ತಿರುವ ಕೀನ್ಯಾದ ರೈತರಿಗೆ ಹಕ್ಕಿಗಳ ಹಿಂಡು ದುಸ್ವಪ್ನವಾಗಿ ಕಾಡುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಈ ಹಕ್ಕಿಗಳು ತಿಂದು ಮುಗಿಸುತ್ತಿವೆ. ಹೀಗಾಗಿ ಬಾನಾಡಿಗಳ ಕಾಟ ನಿಯಂತ್ರಿಸಲು ಅಲ್ಲಿನ ಆಡಳಿತವು ಅವುಗಳ ಮಾರಣಹೋಮಕ್ಕೆ ನಿರ್ಧರಿಸಿದೆ.
2021ರಲ್ಲಿ ಮಿಡತೆಗಳ ಹಿಂಡು ಭಾರತದ ಕೆಲವು ಭಾಗಗಳ ಜಮೀನುಗಳ ಮೇಲೆ ದಿಢೀರ್ ದಾಳಿ ಮಾಡಿದ್ದ ಘಟನೆಗಳು ನಿಮಗೆ ನೆನಪಿರಬಹುದು. ಅದೇ ರೀತಿಯಲ್ಲಿ ಕೀನ್ಯಾದಲ್ಲಿ ಕುಲಿಯಾ ಎಂಬ ಪಕ್ಷಿಗಳು ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ತಿಂದು ನಾಶಪಡಿಸುತ್ತಿವೆ. ಸರ್ಕಾರ ತನ್ನ ಕೊನೆಯ ಪ್ರಯತ್ನವಾಗಿ ಸುಮಾರು 60 ಲಕ್ಷ ಕುಲಿಯಾ ಪಕ್ಷಿಗಳನ್ನು ಇದೀಗ ಕೊಲ್ಲಲು ತೀರ್ಮಾನ ಕೈಗೊಂಡಿದೆ.
ಕುಲಿಯಾ ಪಕ್ಷಿಗಳು ನೋಡಲು ಬಹುತೇಕ ಗುಬ್ಬಚ್ಚಿಗಳಂತೆ ಕಾಣುತ್ತವೆ. ಕೆಂಪು ಮೂಗಿನಿಂದ ರೂಪುಗೊಂಡಿರುವ ಈ ಪಕ್ಷಿಗಳು ನೋಡಲು ಬಹಳ ಸುಂದರವಾಗಿವೆ. ಇದನ್ನು ಆಫ್ರಿಕನ್ ನೈಟಿಂಗೇಲ್ ಎಂದೂ ಕರೆಯುತ್ತಾರೆ. ಈ ಪಕ್ಷಿಗಳು ಕೀನ್ಯಾ ಸಮೃದ್ಧವಾಗಿದ್ದು, ಗುಂಪುಗಳಲ್ಲಿ ಚಲಿಸುತ್ತವೆ. ಮುಖ್ಯವಾಗಿ ಬೀಜಗಳಂದ್ರೆ ಅವುಗಳಿಗೆ ಅಚ್ಚುಮೆಚ್ಚು. ಕಳೆದ ಹತ್ತು ವರ್ಷಗಳಿಂದ ಪೂರ್ವ ಆಫ್ರಿಕಾದ ದೇಶಗಳಲ್ಲಿ ಬರ ಪರಿಸ್ಥಿತಿ ಇದೆ. ಹುಲ್ಲುಗಾವಲುಗಳು ಒಣಗಿ ಹೋಗುತ್ತಿವೆ. ಕುಲಿಯಾ ಪಕ್ಷಿಗಳ ನೈಸರ್ಗಿಕ ಆಹಾರವಾದ ಹುಲ್ಲು ಬೀಜಗಳ ಕೊರತೆ ಉಂಟಾಗಿದೆ. ಪರಿಣಾಮವಾಗಿ, ಅವು ಆಹಾರಕ್ಕಾಗಿ ಅಕ್ಕಿ ಮತ್ತು ಗೋಧಿ ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ.
ಕೀನ್ಯಾದ ಕೆಲವು ಭಾಗಗಳಲ್ಲಿ ಮುಕ್ಕಾಲು ಭಾಗದಷ್ಟು ಬೆಳೆಗಳನ್ನು ಕುಲಿಯಾ ಪಕ್ಷಿಗಳು ತಿನ್ನುತ್ತಿವೆ. ರೈತರು ತಮ್ಮ ಬೆಳೆಗಳನ್ನು ರಕ್ಷಿಸಲು ಪಕ್ಷಿಗಳನ್ನು ಕೊಲ್ಲಲು ದೊಡ್ಡ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಕೀನ್ಯಾ ಸರ್ಕಾರ ಸಹ ರೈತರಿಗೆ ಸಹಾಯ ಮಾಡುತ್ತಿದೆ. 6 ಮಿಲಿಯನ್ ಕುಲಿಯಾ ಪಕ್ಷಿಗಳನ್ನು ಏಕಕಾಲದಲ್ಲಿ ನಿರ್ಮೂಲನೆ ಮಾಡುವ ಗುರಿ ಹೊಂದಿದೆ. ಇದಕ್ಕಾಗಿ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನೂ ಮೀಸಲಿಡಲು ಕೀನ್ಯಾ ಸರ್ಕಾರ ಮುಂದಾಗಿದೆ.