ಸಿಯೋಲ್:ಇಂದು ಬೆಳ್ಳಂಬೆಳಗ್ಗೆ ಉಭಯ ರಾಷ್ಟ್ರಗಳ ಸಮುದ್ರದ ಗಡಿ ರೇಖೆಯಲ್ಲಿ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಶೆಲ್‌ಗಳ ದಾಳಿ ನಡೆದಿದೆ. ಈ ದಾಳಿಯ ಬಗ್ಗೆ ಇಬ್ಬರು ಮಿಲಿಟರಿ ಮುಖ್ಯಸ್ಥರು ಆರೋಪ - ಪ್ರತ್ಯಾರೋಪ ಮಾಡಿದ್ದಾರೆ. ದಕ್ಷಿಣ ಕೊರಿಯಾ ಕೆಲ ದಿನಗಳ ಮುಂಚಿತವಾಗಿ ವಾರ್ಷಿಕ ಮಿಲಿಟರಿ ಕಸರತ್ತು ಆರಂಭಿಸಿದ್ದರಿಂದ ಈ ಕ್ರಮ ಕಂಡು ಬಂದಿದೆ.
ಸೋಮವಾರ (ಇಂದು) ಮುಂಜಾನೆ ದಕ್ಷಿಣ ಕೊರಿಯಾ ಸಮುದ್ರದ ಗಡಿ ನಿಯಮ ಉಲ್ಲಂಘಿಸಿದೆ ಎಂದು ಉತ್ತರ ಕೊರಿಯಾ ಆರೋಪಿಸಿದೆ. ಉತ್ತರ ಕೊರಿಯಾದ ವ್ಯಾಪಾರಿ ಹಡಗನ್ನು ಹಿಮ್ಮೆಟ್ಟಿಸಲು ನಮ್ಮ ನೌಕಾಪಡೆ ಎಚ್ಚರಿಕೆಯ ದಾಳಿ ನಡೆಸಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ನೀಡಿದ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ದಕ್ಷಿಣ ಕೊರಿಯಾಕ್ಕೆ ಎಚ್ಚರಿಕೆಯಾಗಿ 10 ಸುತ್ತು ಶೆಲ್‌ಗಳನ್ನು ಹಾರಿಸುವ ಮೂಲಕ ಉತ್ತರ ಕೊರಿಯಾದ ಮಿಲಿಟರಿ ಪ್ರತಿಕ್ರಿಯಿಸಿದೆ. ಅಪರಿಚಿತ ಹಡಗನ್ನು ಭೇದಿಸುವ ನೆಪದಲ್ಲಿ ದಕ್ಷಿಣ ಕೊರಿಯಾದ ನೌಕಾಪಡೆಯ ಹಡಗು ಉತ್ತರ ಕೊರಿಯಾದ ಸಮುದ್ರದ ಗಡಿಯೊಳಗೆ ನುಗ್ಗಿದೆ ಎಂದು ಉತ್ತರ ಕೊರಿಯಾ ಆರೋಪ ಮಾಡಿದೆ.