ಪ್ಯಾರಿಸ್ (ಫ್ರೆಂಚ್):ಮಕ್ಕಳು ಸೇರಿದಂತೆ ಹಲವು ಜನರ ಮೇಲೆ ವ್ಯಕ್ತಿಯೊಬ್ಬ ಮನಸೋಇಚ್ಛೆ ಚಾಕುವಿನಿಂದ ದಾಳಿ ನಡೆಸಿದ ಘಟನೆ ಆಲ್ಪೈನ್ನ ಅನ್ನೆಸಿಯಲ್ಲಿ ಇಂದು (ಗುರುವಾರ) ನಡೆದಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
''ಪೊಲೀಸರು ದಾಳಿಕೋರನನ್ನು ಬಂಧಿಸಿದ್ದಾರೆ. ಅನ್ನೆಸಿಯ ಪ್ರದೇಶದಲ್ಲಿ ಶಸ್ತ್ರಸಜ್ಜಿತವಾಗಿ ಬಂದಿದ್ದ ವ್ಯಕ್ತಿಯೊಬ್ಬ ಚಾಕುವಿನಿಂದ ಮಕ್ಕಳು ಸೇರಿದಂತೆ ಹಲವು ಜನರ ಮೇಲೆ ಹಲ್ಲೆ ಮಾಡಿ, ಅವರನ್ನು ತೀವ್ರವಾಗಿ ಗಾಯಗೊಳಿಸಿದ್ದಾನೆ. ಪೊಲೀಸರು ಹಾಗೂ ಭಯೋತ್ಪಾದನಾ ವಿರೋಧಿ ತನಿಖಾಧಿಕಾರಿಗಳು ಈ ಕುರಿತು ತೀವ್ರ ತನಿಖೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಭದ್ರತಾ ಪಡೆಗಳಿಂದ ನಡೆದ ಕ್ಷಿಪ್ರ ಕಾರ್ಯಾಚರಣೆಗೆ ಧನ್ಯವಾದಗಳು'' ಎಂದು ಫ್ರಾನ್ಸ್ ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಟ್ವೀಟ್ ಮಾಡಿದ್ದಾರೆ.
ಪೊಲೀಸರ ಪ್ರತಿಕ್ರಿಯೆ: ಗಾಯಗೊಂಡವರಲ್ಲಿ ನಾಲ್ವರು ಮಕ್ಕಳು ಸೇರಿದ್ದಾರೆ. ಈ ಪೈಕಿ ಇಬ್ಬರಿಗೆ ಮಾರಣಾಂತಿಕ ಗಾಯಗಳಾಗಿವೆ. ಉಳಿದ ಇಬ್ಬರು ಮಕ್ಕಳಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಓರ್ವ ವಯಸ್ಕನಿಗೂ ಗಂಭೀರ ಗಾಯಗಳಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
''ಆಟದ ಮೈದಾನದಲ್ಲಿ ಮಕ್ಕಳ ಮೇಲೆ ದಾಳಿ ನಡೆಸಲಾಗಿದೆ'' ಎಂದು ಸ್ಥಳೀಯ ಜನಪ್ರತಿನಿಧಿ ಆಂಟೊಯಿನ್ ಅರ್ಮಾಂಡ್ ಟ್ವೀಟ್ ಮಾಡಿದ್ದಾರೆ. ಈ ದಾಳಿಯನ್ನು ಅತ್ಯಂತ ಹೇಯ ಕೃತ್ಯ ಎಂದು ಖಂಡಿಸಿದ್ದಾರೆ.
''ಜನರು ದಿಕ್ಕಾಪಾಲಾಗಿ ಓಡುತ್ತಿದ್ದರು. ಜೋರಾಗಿ ಅಳುತ್ತಿದ್ದರು. ಭಯಭೀತರಾಗಿದ್ದರು. ಈ ದೃಶ್ಯ ಭಯಾನಕವಾಗಿದೆ'' ಎಂದು ನೆಲ್ಲಿ ಎನ್ನುವ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ''ನಾನು ಕೂಡ ಗಾಬರಿಗೊಂಡಿದ್ದೇನೆ. ಮಕ್ಕಳ ಮೇಲೆ ದಾಳಿ ನಡೆಸಿರುವ ಘಟನೆ ತೀವ್ರ ಖಂಡನೀಯ. ನಿವಾಸಿಗಳು ಹಾಗೂ ಪ್ರವಾಸಿಗರು ಇಷ್ಟಪಡುವ ಶಾಂತಿಯುತವಾದ ಸ್ಥಳದಲ್ಲೇ ದುರ್ಘಟನೆಯೊಂದು ನಡೆದಿದ್ದು ಸರಿಯಲ್ಲ'' ಎಂದು ಸಂಸದ ವರ್ಜಿನ್ ಡುಬಿ-ಮುಲ್ಲರ್ ಆತಂಕ ವ್ಯಕ್ತಪಡಿಸಿದರು.