ಲಂಡನ್:ಬ್ರಿಟಿಷ್ ಇತಿಹಾಸದಲ್ಲೇ ಸುದೀರ್ಘಾವಧಿಗೆ ರಾಣಿಯಾಗಿದ್ದ 2ನೇ ಎಲಿಜಬೆತ್(96) ತೀವ್ರ ಅನಾರೋಗ್ಯದಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಇದರ ಬೆನ್ನಲ್ಲೇ ಅವರ ಹಿರಿಯ ಮಗ ಚಾರ್ಲ್ಸ್ ತಕ್ಷಣದಿಂದಲೇ ಜಾರಿಗೆ ಬರುವಂತೆ ಲಂಡನ್ ರಾಜನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಅಗಲಿದ ತಾಯಿಗೆ ಹೃದಯಸ್ಪರ್ಶಿ ಗೌರವ ಸಲ್ಲಿಕೆ ಮಾಡಿದ್ದು, ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.
ಎಲಿಜಬೆತ್ ರಾಣಿ ನಿಧನದ ಬೆನ್ನಲ್ಲೇ ಕಿಂಗ್ ಚಾರ್ಲ್ಸ್ ಅವರ ರೆಕಾರ್ಡ್ ಮಾಡಿರುವ ಭಾಷಣ ನಿನ್ನೆ ಪ್ರಸಾರಗೊಂಡಿದ್ದು, ಶೋಕಸಾಗರದಿಂದ ಕೂಡಿರುವ ಇಂಗ್ಲೆಂಡ್ ಜನತೆಯನ್ನುದ್ದೇಶಿಸಿ ರಾಜ ಚಾರ್ಲ್ಸ್ III ಮಾತನಾಡಿದ್ದಾರೆ. 'ಥ್ಯಾಂಕ್ಯೂ ಮೈ ಡಾರ್ಲಿಂಗ್ ಮಮಾ( Thank You" to my darling mama). ನಿಮ್ಮ ಜೀವನದ ಉದ್ದಕ್ಕೂ ನನಗೆ ಸ್ಫೂರ್ತಿಯಾಗಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರೀತಿಯ ವಾತ್ಸಲ್ಯ, ಮಾರ್ಗದರ್ಶನಕ್ಕೆ ಧನ್ಯವಾದ. ನಿಮ್ಮ ಜೀವಮಾನವಿಡಿ ಜನರ, ದೇಶದ ಸೇವೆ ಮಾಡಿದ್ದು, ನಾನು ನಿಮ್ಮ ರೀತಿಯಲ್ಲೇ ಜನರ ಸೇವೆ ಮಾಡುವೆ' ಎಂದಿದ್ದಾರೆ.
"ನನ್ನ ಪ್ರೀತಿಯ ತಾಯಿ, ಅಗಲಿರುವ ತಂದೆಯನ್ನ ಸೇರಲು ಕೊನೆಯ ಪ್ರಯಾಣ ಆರಂಭಿಸಿದಾಗ ನಾ ಹೇಳ ಬಯಸುವುದು ಇಷ್ಟೇ. ನಮ್ಮ ಕುಟುಂಬ ಹಾಗೂ ರಾಷ್ಟ್ರಕ್ಕಾಗಿ ನೀವು ಸಲ್ಲಿಸಿದ ಸೇವೆ ಹಾಗೂ ಪ್ರೀತಿಗೆ ಧನ್ಯವಾದಗಳು. ಇಷ್ಟು ವರ್ಷ ಶ್ರದ್ಧೆಯಿಂದ ಕೆಲಸ ಮಾಡಿದ್ದೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.
ನಿಮ್ಮನ್ನು ಕಳೆದುಕೊಂಡು ತುಂಬಾ ಆಳವಾದ ದುಃಖದಲ್ಲಿ ಮಾತನಾಡುತ್ತಿದ್ದೇನೆ. ನೀವು ನನ್ನ ಕುಟುಂಬಕ್ಕೆ ಸ್ಫೂರ್ತಿ ಹಾಗೂ ಉತ್ತಮ ಉದಾಹರಣೆಯಾಗಿದ್ದೀರಿ. ಅದಕ್ಕೆ ನಾವು ಋಣಿ. ನಿಮ್ಮ ಉತ್ತಮವಾದ ಜೀವನ ಶೈಲಿ ಎಲ್ಲರಿಗೂ ಮಾದರಿ. ನಿಮ್ಮ ರೀತಿ ನಾನು ದೇಶ ಸೇವೆ ಮಾಡುವೆ ಎಂದು ತಮ್ಮ ಐತಿಹಾಸಿಕ ಭಾಷಣದಲ್ಲಿ ತಿಳಿಸಿದರು.