ಸಿಯೋಲ್ : ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್-ಉನ್ ಅವರ ಪುತ್ರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಈಕೆ ಕಿಮ್ನ ಮೊದಲ ಮಗುವಾಗಿರಬಹುದು ಎಂದು ಹೇಳಲಾಗಿದ್ದು, ಇವಳು ಕಿಮ್ ನಂತರ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಬಹುದಾದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ದಕ್ಷಿಣ ಕೊರಿಯಾದ ರಾಜಕೀಯ ತಜ್ಞರ ಕೂಟವೊಂದು ಹೇಳಿದೆ. ಕಿಮ್ ಅವರ ಪುತ್ರಿಯ ಹೆಸರನ್ನು ಜು ಏ (Ju-ae) ಎಂದು ಹೇಳಲಾಗಿದೆ. ಕಿಮ್ ಅವರಿಗೆ ಒಟ್ಟು ಮೂವರು ಮಕ್ಕಳಿದ್ದಾರೆ ಎಂದು ಹೇಳಲಾಗಿದ್ದು, ಮೂರನೇ ಮಗು ಹೆಣ್ಣಾ ಅಥವಾ ಗಂಡಾ ಎಂಬುದು ಜಗತ್ತಿಗೆ ಮಾಹಿತಿ ಇಲ್ಲ.
ವೈಯಕ್ತಿಕವಾಗಿ ನನಗೆ ತಿಳಿದ ಮಟ್ಟಿಗೆ ಜು-ಎ ಕಿಮ್ ಜೊಂಗ್-ಉನ್ ಅವರ ಮೊದಲ ಮಗುವಾಗಿರುವ ಸಾಧ್ಯತೆ ಹೆಚ್ಚು. ಜು ಎ ಅವರನ್ನು ಪ್ರಸ್ತುತ ಕಿಮ್ ಅವರ ಉತ್ತರಾಧಿಕಾರಿ ಎಂದು ಬಿಂಬಿಸಲಾಗುತ್ತಿದೆ ಎಂದು ಕೊಹ್ ಸುದ್ದಿಗಾರರಿಗೆ ತಿಳಿಸಿದರು. ಕೊಹ್ ಸಿಯೋಲ್‌ನಲ್ಲಿರುವ ಕೊರಿಯಾ ಇನ್ಸ್ಟಿಟ್ಯೂಟ್ ಫಾರ್ ನ್ಯಾಷನಲ್ ಯುನಿಫಿಕೇಶನ್ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಜು ಎ ಗೆ ಸದ್ಯ 10 ವರ್ಷಗಳಾಗಿರಬಹುದು ಎಂದು ನಂಬಲಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಿನಿಂದ ಆಕೆ ಆಗಾಗ ಮಿಲಿಟರಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಖಂಡಾಂತರ ಕ್ಷಿಪಣಿಯ ಪರೀಕ್ಷೆಯ ಸಮಯದಲ್ಲಿಯೂ ಆಕೆ ತನ್ನ ತಂದೆಯೊಂದಿಗೆ ಸ್ಥಳದಲ್ಲಿ ಹಾಜರಿದ್ದಳು. ಮತ್ತೊಂದು ಮೂಲದ ಪ್ರಕಾರ, ಜು ಎ ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರೂ, ಕೊರಿಯಾದ ಪಿತೃ ಪ್ರಧಾನ ಸಾಮಾಜಿಕ ವ್ಯವಸ್ಥೆಯ ಕಾರಣದಿಂದ ಆಕೆ ಕಿಮ್ ಅವರ ಉತ್ತರಾಧಿಕಾರಿ ಆಗದೇ ಇರಬಹುದು. ಹಾಗೆಯೇ ಕಿಮ್ ಅವರ ಮೂರನೇ ಮಗು ಗಂಡು ಮಗು ಎಂಬ ವಾದಗಳ ಕಾರಣದಿಂದ ಸಹ ಜು ಎ ಉತ್ತರಾಧಿಕಾರಿ ಆಗದಿರಬಹುದು.