ಮಾಸ್ಕೋ/ಸಿಯೋಲ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವೆ ಬುಧವಾರ ಮಹತ್ವದ ಮಾತುಕತೆ ನಡೆದಿದೆ ರಷ್ಯಾದ ಸರ್ಕಾರಿ ಸುದ್ದಿಸಂಸ್ಥೆ 'ಟಾಸ್' ವರದಿ ಮಾಡಿದೆ. ರಷ್ಯಾದ ವೊಸ್ಟೊಚ್ನಿ ಕಾಸ್ಮೊಡ್ರೋಮ್ನ ದೇಶೀಯ ಬಾಹ್ಯಾಕಾಶ ಉಡಾವಣಾ ಕೇಂದ್ರದಲ್ಲಿ ಇಬ್ಬರು ನಾಯಕರು ಭೇಟಿಯಾಗಿದ್ದಾರೆ. ಈ ಭೇಟಿಗೆ ಕೆಲವೇ ಗಂಟೆಗಳಿರುವಂತೆ ಉತ್ತರ ಕೊರಿಯಾ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ.
ಈ ಭೇಟಿಯ ಮುಖೇನ ಅಮೆರಿಕದೊಂದಿಗಿನ ವೈಮನಸ್ಯದಲ್ಲಿ ತಾವು ಹೇಗೆ ಸಮಾನಮನಸ್ಕರು ಎಂಬುದನ್ನು ಪ್ರದರ್ಶಿಸಿದರು. ಸೊಯುಜ್ -2 ಬಾಹ್ಯಾಕಾಶ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಪುಟಿನ್ ಹಾಗೂ ಕಿಮ್ ತಮ್ಮ ಮಾತುಕತೆ ನಡೆಸಿದರು. ಈ ವೇಳೆ, ರಷ್ಯಾದ ಬಾಹ್ಯಾಕಾಶ ಅಧಿಕಾರಿಗಳಿಗೆ ರಾಕೆಟ್‌ಗಳ ಬಗ್ಗೆ ಕಿಮ್ ಪ್ರಶ್ನೆಗಳನ್ನು ಕೇಳಿದರು ಎಂದು ವರದಿಯಾಗಿದೆ.
ರಷ್ಯಾದ ಪವಿತ್ರ ಹೋರಾಟಕ್ಕೆ ಬೆಂಬಲ-ಕಿಮ್:ರಷ್ಯಾ ಅಧ್ಯಕ್ಷ ಪುಟಿನ್ ಅವರ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸಲು ರಷ್ಯಾದ ಪವಿತ್ರ ಹೋರಾಟಕ್ಕೆ ಉತ್ತರ ಕೊರಿಯಾ ಸಂಪೂರ್ಣ ಮತ್ತು ಬೇಷರತ್ ಬೆಂಬಲ ನೀಡುತ್ತದೆ ಎಂದು ಕಿಮ್ ಪ್ರಕಟಿಸಿದ್ದಾರೆ. ಉಕ್ರೇನ್ ಮೇಲಿನ ಯುದ್ಧದ ಕುರಿತು ಉಲ್ಲೇಖಿಸಿದ ಅವರು, ಉತ್ತರ ಕೊರಿಯಾ ಯಾವಾಗಲೂ ಸಾಮ್ರಾಜ್ಯಶಾಹಿ ವಿರೋಧಿಗಳೆದುರು ಮಾಸ್ಕೋ ಪರವಾಗಿ ನಿಲ್ಲುತ್ತದೆ. ರಷ್ಯಾದೊಂದಿಗೆ ಉತ್ತಮ ಸಂಬಂಧಕ್ಕೆ ನಮ್ಮ ಮೊದಲ ಆದ್ಯತೆ ಎಂದು ಕಿಮ್ ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಇದನ್ನೂ ಓದಿ:ಉತ್ತರ ಕೊರಿಯಾ ಸ್ವಾತಂತ್ರ್ಯೋತ್ಸವಕ್ಕೆ ಚೀನಾ, ರಷ್ಯಾ ಪ್ರತಿನಿಧಿಗಳಿಗೆ ಆಹ್ವಾನ, ಪಾಶ್ಚಾತ್ಯ ರಾಷ್ಟ್ರಗಳಿಗೆ ಸಡ್ಡು?
ಇದಕ್ಕೂ ಮೊದಲು ಸರ್ವಾಧಿಕಾರಿ ಕಿಮ್ ರಷ್ಯಾಧ್ಯಕ್ಷ ಪುಟಿನ್ ಅವರ ಭೇಟಿಗಾಗಿ ದೂರದ ರಷ್ಯಾ ಪೂರ್ವದಲ್ಲಿರುವ ಕಾಸ್ಮೋಡ್ರೋಮ್‌ಗೆ ಆಗಮಿಸಿದರು. ಉಡಾವಣಾ ವಾಹನದ ಅಸೆಂಬ್ಲಿ ಕಟ್ಟಡದ ಪ್ರವೇಶದ್ವಾರದಲ್ಲಿ ಕಿಮ್ ಅವರನ್ನು ಪುಟಿನ್ ಆತ್ಮೀಯವಾಗಿ ಬರಮಾಡಿಕೊಂಡರು. ಇಬ್ಬರು ನಾಯಕರು ಪರಸ್ಪರ ಕೈಕುಲುಕಿದರು. ಈ ವೇಳೆ, ಕಿಮ್ ಅವರನ್ನು ನೋಡಿ ತುಂಬಾ ಸಂತೋಷವಾಯಿತು ಎಂದು ಪುಟಿನ್ ಹೇಳಿದರು. ಮತ್ತೊಂದೆಡೆ, ಕಿಮ್ ಅವರ ಭಾಷಾಂತರಕಾರರು ಸಹ ಆತ್ಮೀಯ ಸ್ವಾಗತಕ್ಕಾಗಿ ಪುಟಿನ್ ಅವರಿಗೆ ಧನ್ಯವಾದ ತಿಳಿಸಿದರು. ಇದರ ನಂತರ ಉಭಯ ನಾಯಕರು ಕಾಸ್ಮೋಡ್ರೋಮ್ ಪರಿಶೀಲಿಸಿದ್ದು, ತಮ್ಮ ಮಾತುಕತೆಗೆ ಆರಂಭಿಸಿದರು ಎಂದು ರಷ್ಯಾದ ಮಾಧ್ಯಮ ವರದಿ ಮಾಡಿದೆ.
ಇದಕ್ಕೂ ಕೆಲ ಗಂಟೆಗಳ ಹಿಂದೆ ಉತ್ತರ ಕೊರಿಯಾ, ಸಮುದ್ರದ ಕಡೆಗೆ ತನ್ನ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿತು. ಈ ಮೂಲಕ 2022ರ ಆರಂಭದಿಂದಲೂ ನಡೆಸುತ್ತಿರುವ ಪ್ರಚೋದನಕಾರಿ ಶಸ್ತ್ರಾಸ್ತ್ರ ಪರೀಕ್ಷೆಗೆ ಉತ್ತರ ಕೊರಿಯಾ ಮತ್ತಷ್ಟು ವೇಗ ನೀಡಿತು. ಇದರೊಂದಿಗೆ ಉಕ್ರೇನ್ ಮೇಲೆ ಪುಟಿನ್ ಯುದ್ಧ ದೃಷ್ಟಿಯಲ್ಲಿಟ್ಟುಕೊಂಡು ಕಿಮ್, ತನ್ನ ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನೂ ಚುರುಕುಗೊಳಿಸುವ ಸಂದೇಶ ರವಾನಿಸಿದರು.
ಮತ್ತೊಂದೆಡೆ, ಪುಟಿನ್ ಅವರಿಗೆ ಕಿಮ್ ಜೊತೆಗಿನ ಈ ಸಭೆಯು ಕಳೆದ 18 ತಿಂಗಳ ಯುದ್ಧದಿಂದ ಬರಿದಾದ ಯುದ್ಧ ಸಾಮಗ್ರಿ ಮಳಿಗೆಗಳನ್ನು ಪುನಃ ತುಂಬಿಸಲು ಒಂದು ಸದಾವಕಾಶ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ವೇಳೆ, ಕಿಮ್ ಅವರಿಗೆ ವಿಶ್ವಸಂಸ್ಥೆಯ ನಿರ್ಬಂಧಗಳು ಮತ್ತು ರಾಜತಾಂತ್ರಿಕ ಪ್ರತ್ಯೇಕತೆಯನ್ನು ದುರ್ಬಲಗೊಳಿಸಲು ಅವಕಾಶ ಸಿಕ್ಕಂತಾಗಿದೆ ಎಂದು ಹೇಳಲಾಗುತ್ತಿದೆ. ಕಿಮ್ ನಾಲ್ಕು ವರ್ಷಗಳ ನಂತರ ರಷ್ಯಾಕ್ಕೆ ಭೇಟಿ ನೀಡಿದ್ದಾರೆ. ಅವರ ಈ ನಿರ್ಧಾರವು ಮಾಸ್ಕೋದೊಂದಿಗಿನ ತಮ್ಮ ಸಂಬಂಧಗಳ ಕಾರ್ಯತಂತ್ರದ ಪ್ರಾಮುಖ್ಯತೆಗೆ ಉತ್ತರ ಕೊರಿಯಾ ಆದ್ಯತೆ ನೀಡುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಉತ್ತರ ಕೊರಿಯಾದ ಅಧಿಕೃತ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ:ರಷ್ಯಾಗೆ ತೆರಳಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್