ಮಾಸ್ಕೋ (ರಷ್ಯಾ):ಕ್ರಿಮಿಯಾ ಮತ್ತು ರಷ್ಯಾ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿ, ಮೂವರು ಸಾವನ್ನಪ್ಪಿದ್ದಾರೆ. ಇದರಿಂದ ಸೇತುವೆಯ ಮೇಲೆ ರಸ್ತೆ ಮತ್ತು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕೆರ್ಚ್ ಸೇತುವೆ ಮೇಲೆ ಶನಿವಾರ ಬೆಳಗ್ಗೆ ಇಂಧನ ಸಾಗಿಸುತ್ತಿದ್ದ ರೈಲಿಗೆ ಬೆಂಕಿ ಬಿದ್ದಿದೆ. ಟ್ರಕ್ ಬಾಂಬ್‌ನಿಂದಾಗಿ ಈ ರೈಲಿಗೆ ಬೆಂಕಿ ತಗುಲಿದೆ. ಇದರಿಂದ ರೈಲಿನ ಟ್ಯಾಂಕರ್ಗಳು ಹೊತ್ತಿ ಉರಿದಿವೆ. ಇದರ ಪರಿಣಾಮವಾಗಿ ಸೇತುವೆಯ ಎರಡು ಭಾಗಗಳು ಭಾಗಶಃ ಕುಸಿದಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ:1962ರ ನಂತರ ಈಗ ಪರಮಾಣು ಯುದ್ಧದ ಭೀತಿ ಅತ್ಯಧಿಕ: ಬೈಡನ್
ಇದೇ ವೇಳೆ ಈ ಸ್ಫೋಟವು ಕಿಲೋ ಮೀಟರ್ ದೂರದವರೆಗೂ ಕೇಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರೈಲೊಂದು ಸೇತುವೆಯನ್ನು ದಾಟುತ್ತಿರುವಾಗ ಸ್ಫೋಟ ಸಂಭವಿಸಿದೆ. ಆದರೆ, ಇದಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಜೊತೆಗೆ ಈ ಬೆಂಕಿಯ ಜ್ವಾಲೆಯಿಂದ ಸ್ವಲ್ಪ ದೂರದಲ್ಲಿ ಮತ್ತೊಂದು ಕಡೆಯಲ್ಲೂ ಬೆಂಕಿ ಕಾಣಿಸಿಕೊಂಡಿರುವ ಕೆಲವು ಫೋಟೋಗಳು ಹರಿದಾಡುತ್ತಿವೆ.
ಇದರ ಮಧ್ಯೆ ಸೇತುವೆಯ ಮೂಲಕ ವಾಹನದಲ್ಲಿ ಹೋಗುತ್ತಿದ್ದ ಒಬ್ಬ ಪುರುಷ ಮತ್ತು ಮಹಿಳೆ ಸ್ಫೋಟದಿಂದ ಸಾವನ್ನಪ್ಪಿದ್ದಾರೆ. ಅವರ ಮೃತ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೋರ್ವ ಮೃತ ವ್ಯಕ್ತಿಯ ಮಾಹಿತಿ ಲಭ್ಯವಾಗಿಲ್ಲ ಎಂದು ರಷ್ಯಾದ ತನಿಖಾ ಸಮಿತಿ ತಿಳಿಸಿದೆ.
ರಷ್ಯಾ ಮತ್ತು ಕ್ರಿಮಿಯಾಕ್ಕೆ ಪ್ರಮುಖ ಸೇತುವೆ: ರಷ್ಯಾದಿಂದ ಕ್ರಿಮಿಯಾಕ್ಕೆ ಸಂಪರ್ಕ ಕಲ್ಪಿಸುವಲ್ಲಿ ಈ ಕೆರ್ಚ್ ಸೇತುವೆ ಪ್ರಮುಖವಾಗಿದೆ. ಕಪ್ಪು ಸಮುದ್ರ ಮತ್ತು ಅಜೋವ್ ಸಮುದ್ರವನ್ನು ಸಂಪರ್ಕಿಸುವ ಕೆರ್ಚ್ ಜಲಸಂಧಿಗೆ ಅಡ್ಡಲಾಗಿ 19 ಕಿಲೋ ಮೀಟರ್ (12 ಮೈಲಿ) ದೂರದ ಈ ಸೇತುವೆಯು 2018ರಲ್ಲಿ ಸಂಚಾರಕ್ಕೆ ಮುಕ್ತವಾಗಿದೆ. ಇದಾದ ಎರಡು ವರ್ಷಗಳ ನಂತರ ರೈಲ್ವೆ ಸೇತುವೆಯು ಸಂಚಾರಕ್ಕೆ ತೆರೆಯಲಾಗಿತ್ತು. ಮೇಲಾಗಿ ಇದು ಯುರೋಪ್‌ನಲ್ಲಿ ಅತಿ ಉದ್ದದ ಸೇತುವೆ ಎಂದೇ ಹೇಳಲಾಗುತ್ತದೆ.
ಇದು ಕೇವಲ ಪ್ರಾರಂಭ ಎಂದ ಉಕ್ರೇನ್:ರಷ್ಯಾ ಹಾಗೂ ಕ್ರಿಮಿಯಾಕ್ಕೆ ನಿರ್ಣಾಯಕ ಸೇತುವೆಗೆ ಹಾನಿಯಾದ ಬೆನ್ನಲ್ಲೇ ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಸಹಾಯಕ ಮಿಖಾಯಿಲ್ ಪೊಡೊಲಿಯಾಕ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಸ್ಫೋಟವು ಕೇವಲ ಪ್ರಾರಂಭ ಎಂದು ಮಿಖಾಯಿಲ್ ಪೊಡೊಲಿಯಾಕ್ ಕೀವ್‌ನಲ್ಲಿ ಹೇಳಿದ್ದಾರೆ.
ಅಲ್ಲದೇ, ಫೆಬ್ರವರಿ 24ರಂದು ಉಕ್ರೇನ್ ಮೇಲೆ ರಷ್ಯಾ ಯುದ್ಧ ಪ್ರಾರಂಭಿಸಿದ ನಂತರ ಉಕ್ರೇನಿಯನ್ ಅಧಿಕಾರಿಗಳು ಹಲವಾರು ಸಂದರ್ಭಗಳಲ್ಲಿ ಸೇತುವೆಯ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದೂ ವರದಿಯಾಗಿದೆ. ಆಗಸ್ಟ್‌ನಲ್ಲಿ ಇದೇ ಮಿಖಾಯಿಲ್ ಪೊಡೊಲಿಯಾಕ್, ಯುರೋಪಿನ ಅತಿದೊಡ್ಡ ಸೇತುವೆಯನ್ನು ನಾಶಗೊಳಿಸಬೇಕು ಎಂದು ಹೇಳಿದ್ದರು. ಏಕೆಂದರೆ ಇದು ಅಕ್ರಮವಾಗಿ ನಿರ್ಮಾಣವಾಗಿದೆ. ಕ್ರಿಮಿಯಾದಲ್ಲಿ ರಷ್ಯಾದ ಸೈನ್ಯವನ್ನು ಪೂರೈಸುವ ಮುಖ್ಯ ಗೇಟ್‌ವೇ ಎಂದು ಹೇಳಿಕೆ ಕೊಟ್ಟಿದ್ದರು.
ಕೆರ್ಚ್ ಸೇತುವೆ ಟಾರ್ಗೆಟ್ಗೆ ಕಾರಣವೇನು?: 2014ರಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಉಕ್ರೇನ್‌ನಿಂದ ದೂರ ಸರಿದು ರಷ್ಯಾದೊಂದಿಗೆ ಮತ್ತೆ ಒಂದಾಗಲು ಕ್ರಿಮಿಯಾ ಮತ ಚಲಾಯಿಸಿತ್ತು. ಹೀಗಾಗಿಯೇ ಕ್ರಿಮಿಯಾವನ್ನು ಮರಳಿ ಪಡೆಯಲು ಉಕ್ರೇನ್ ಪ್ರಯತ್ನಿಸುತ್ತಿದೆ. ಇದೀಗ ಈ ಸೇತುವೆಯು ರಷ್ಯಾಕ್ಕೆ ಅತಿ ಹೆಚ್ಚು ಮಹತ್ವದ್ದಾಗಿದೆ. ಕ್ರಿಮಿಯಾ ಮತ್ತು ದಕ್ಷಿಣ ರಷ್ಯಾ, ಆಕ್ರಮಿತ ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳಿಗೆ ಪ್ರಮುಖ ಪೂರೈಕೆ ಮಾರ್ಗವಾಗಿದೆ.
ಇದನ್ನೂ ಓದಿ:ಇಸ್ರೇಲ್ನಲ್ಲಿ ಚಾಕು ಇರಿದು ಭಾರತೀಯ ಯುವಕನ ಕೊಲೆ