ವಾಷಿಂಗ್ಟನ್ :ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯ ಬಗ್ಗೆ 4 ಮಾಧ್ಯಮ ಸಂಸ್ಥೆಗಳಿಗೆ ಮೊದಲೇ ಗೊತ್ತಿತ್ತು ಎಂದು ಆರೋಪಿಸಿರುವ ಇಸ್ರೇಲ್ ಸರ್ಕಾರ, ಈ ಸಂಸ್ಥೆಗಳಿಂದ ಉತ್ತರ ಕೇಳಿದೆ. ಆದರೆ, ದಾಳಿಯ ಬಗ್ಗೆ ನಮಗೆ ಮೊದಲೇ ಗೊತ್ತಿರಲಿಲ್ಲ ಎಂದು ಈ ಸಂಸ್ಥೆಗಳು ಹೇಳಿವೆ. ಹಮಾಸ್ ಭಯೋತ್ಪಾದಕರು ಇಸ್ರೇಲ್ನೊಳಗೆ ನುಗ್ಗಿ ನಾಗರಿಕರನ್ನು ಹತ್ಯೆ ಮಾಡುತ್ತಿರುವ ಸಂದರ್ಭದಲ್ಲಿ ಈ ಸಂಸ್ಥೆಗಳು ನೇಮಿಸಿಕೊಂಡ ಫೋಟೋ ಜರ್ನಲಿಸ್ಟ್ಗಳು ಅವರೊಂದಿಗೆ ಇದ್ದರು ಎಂಬ ಮಾಹಿತಿಯನ್ನು Honest Reporting ಡಾಟ್ com ಎಂಬ ಇಸ್ರೇಲಿ ಮಾಧ್ಯಮ ವಾಚ್ಡಾಗ್ ಬಹಿರಂಗಪಡಿಸಿದೆ. ಇದರ ನಂತರ ಇಸ್ರೇಲ್ ಸರ್ಕಾರ ಗುರುವಾರ ನ್ಯೂಯಾರ್ಕ್ ಟೈಮ್ಸ್, ಸಿಎನ್ಎನ್, ಅಸೋಸಿಯೇಟೆಡ್ ಪ್ರೆಸ್ (ಎಪಿ) ಮತ್ತು ರಾಯಿಟರ್ಸ್ ಸಂಸ್ಥೆಗಳನ್ನು ಸಂಪರ್ಕಿಸಿದೆ.
"ಈ ಪತ್ರಕರ್ತರು ಮಾನವೀಯತೆಯ ವಿರುದ್ಧದ ಅಪರಾಧಗಳಲ್ಲಿ ಭಯೋತ್ಪಾದಕರ ಸಹಚರರಾಗಿದ್ದರು. ಅವರ ಕ್ರಮಗಳು ವೃತ್ತಿಪರ ನೈತಿಕತೆಗೆ ವಿರುದ್ಧವಾಗಿವೆ" ಎಂದು ಇಸ್ರೇಲ್ ಪ್ರಧಾನಿ ಕಚೇರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಹಮಾಸ್ ಉಗ್ರರ ಜೊತೆ ಕಾಣಿಸಿಕೊಂಡ ಫೋಟೊಗ್ರಾಫರ್ಗಳನ್ನು ನೇಮಿಸಿಕೊಂಡಿದ್ದ ಮಾಧ್ಯಮ ಸಂಸ್ಥೆಗಳ ಬ್ಯೂರೋ ಮುಖ್ಯಸ್ಥರಿಗೆ ಇಸ್ರೇಲ್ನ ಸರ್ಕಾರಿ ಮಾಧ್ಯಮ ಇಲಾಖೆ ತುರ್ತು ಪತ್ರ ಬರೆದು ಈ ಬಗ್ಗೆ ವಿವರಣೆ ನೀಡುವಂತೆ ಕೇಳಿದೆ. ರಾಷ್ಟ್ರೀಯ ಸಾರ್ವಜನಿಕ ರಾಜತಾಂತ್ರಿಕ ನಿರ್ದೇಶನಾಲಯವು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
"ಗಾಜಾ ಪಟ್ಟಿಯ ಪಕ್ಕದ ಸಮುದಾಯಗಳಲ್ಲಿ ಅಕ್ಟೋಬರ್ 7 ರಂದು ಹಮಾಸ್ ಭಯೋತ್ಪಾದಕರು ನಡೆಸಿದ ಕ್ರೂರ ಕೊಲೆ ಕೃತ್ಯಗಳನ್ನು ವರದಿ ಮಾಡಲು ಅಂತಾರಾಷ್ಟ್ರೀಯ ಮಾಧ್ಯಮಗಳೊಂದಿಗೆ ಕೆಲಸ ಮಾಡುವ ಫೋಟೋ ಜರ್ನಲಿಸ್ಟ್ಗಳು ಸೇರಿಕೊಂಡಿದ್ದರು ಎಂಬ ವಿಚಾರವನ್ನು ಪಿಎಂಒದಲ್ಲಿನ ರಾಷ್ಟ್ರೀಯ ಸಾರ್ವಜನಿಕ ರಾಜತಾಂತ್ರಿಕ ನಿರ್ದೇಶನಾಲಯವು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ" ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಆರೋಪ ಎದುರಿಸಿದ ನಾಲ್ಕು ಮಾಧ್ಯಮ ಸಂಸ್ಥೆಗಳು HonestReporting ಡಾಟ್ com ಪ್ರಕಟಿಸಿದ ವರದಿಯನ್ನು ತಿರಸ್ಕರಿಸುವ ಹೇಳಿಕೆಗಳನ್ನು ಪ್ರಕಟಿಸಿವೆ.
ದಾಳಿಯ ಸಮಯದಲ್ಲಿ ಹಮಾಸ್ ಉಗ್ರರೊಂದಿಗೆ ಇದ್ದರು ಎಂದು ವರದಿಯಲ್ಲಿ ಗುರುತಿಸಲ್ಪಟ್ಟ ನಂತರ ಸ್ವತಂತ್ರ ಛಾಯಾಗ್ರಾಹಕ ಹಸನ್ ಎಸ್ಲಾಯಾ ಅವರೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದೇವೆ ಎಂದು ಎಪಿ ಮತ್ತು ಸಿಎನ್ಎನ್ ತಿಳಿಸಿವೆ. "ಅಕ್ಟೋಬರ್ 7 ರ ದಾಳಿಗಳು ಸಂಭವಿಸುವ ಮೊದಲು ಅಸೋಸಿಯೇಟೆಡ್ ಪ್ರೆಸ್ಗೆ ಇದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ" ಎಂದು ಅಸೋಸಿಯೇಟೆಡ್ ಪ್ರೆಸ್ನ ಮಾಧ್ಯಮ ಸಂಬಂಧಗಳ ನಿರ್ದೇಶಕ ಲಾರೆನ್ ಈಸ್ಟನ್ ಗುರುವಾರ ರಾತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಮಾಸ್ ದಾಳಿಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಮತ್ತು ಅಕ್ಟೋಬರ್ 7 ರಂದು ಹಮಾಸ್ ಉಗ್ರರ ಜೊತೆಗೆ ನಾವು ನಮ್ಮ ಪತ್ರಕರ್ತರನ್ನು ಸೇರಿಸಿದ್ದೆವು ಎಂಬ ಆರೋಪಗಳನ್ನು ನಿರಾಕರಿಸುತ್ತಿದ್ದೇವೆ ಎಂದು ರಾಯಿಟರ್ಸ್ ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ : ಯುದ್ಧದ ಪರಿಣಾಮ: ತೀವ್ರ ಬಡತನದ ಸುಳಿಯಲ್ಲಿ ಪ್ಯಾಲೆಸ್ಟೈನ್