ವಾಷಿಂಗ್ಟನ್ ಡಿಸಿ :ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಪ್ರತಿಸ್ಪರ್ಧಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ದೇಶದಲ್ಲಿ ಅತ್ಯಂತ ಅಪಾಯಕಾರಿ ಸಂಗತಿ ನಡೆಯುತ್ತಿದೆ, ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯ ಸೃಷ್ಟಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಅರಿಜೋನಾ ರಾಜ್ಯದಲ್ಲಿ ಗುರುವಾರ ಭಾಷಣ ಮಾಡಿದ ಜೋ ಬೈಡನ್, ದೇಶದಲ್ಲಿ ಈಗ ಅತ್ಯಂತ ಅಪಾಯಕಾರಿಯಾದದ್ದು ನಡೆಯುತ್ತಿದೆ. ಮುಂಬರುವ ಚುನಾವಣೆ ಹಿನ್ನೆಲೆ ಆಮೂಲಾಗ್ರ ಪ್ರಚಾರ ಮಾಡಲಾಗುತ್ತಿದೆ. ಆದ್ರೆ, ಇದು ಪ್ರಜಾಪ್ರಭುತ್ವದ ಆಧಾರಕ್ಕೆ ಅನುಗುಣವಾಗಿಲ್ಲ. ಅಸ್ತ್ರಗಳ ಬಲದಿಂದ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಸಾಧ್ಯವಿಲ್ಲ. ಜನರೇ ಇಂತಹ ವ್ಯಕ್ತಿಗಳ ಪರವಾಗಿ ನಿಲ್ಲದಿದ್ದಾಗ ಅವುಗಳನ್ನು ನಾಶಪಡಿಸಬಹುದು ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳುವ ಮೂಲಕ ಟ್ರಂಪ್ ಅವರ ಚುನಾವಣಾ ಪ್ರಚಾರವನ್ನು ಅಪಾಯಕಾರಿ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷವಾದ ರಿಪಬ್ಲಿಕನ್ನರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಬೈಡನ್, "ಇಂದಿನ ರಿಪಬ್ಲಿಕನ್ ಪಕ್ಷವು MAGA ರಿಪಬ್ಲಿಕನ್ ಉಗ್ರಗಾಮಿಗಳಿಂದ ನಡೆಸಲ್ಪಡುತ್ತಿದೆ. ಅಮೆರಿಕದ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬದಲಾಯಿಸುವುದು ಈ ಮೂಲಭೂತವಾದಿಗಳ ಕಾರ್ಯಸೂಚಿಯಾಗಿದೆ. MAGA ಆಂದೋಲನವು ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಘೋಷಣೆಯ ಕಿರು ರೂಪವಾಗಿದೆ. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ 'ಮೇಕ್ ಅಮೆರಿಕ, ಗ್ರೇಟ್ ಎಗೇನ್' ಎಂಬ ಸ್ಲೋಗನ್ ನೀಡಿದ್ದು, ಇದೀಗ ಮತ್ತೆ ಜನಪ್ರಿಯವಾಗುತ್ತಿದೆ ಎಂದರು.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೈಯಕ್ತಿಕವಾಗಿ ಶಕ್ತಿ ಶಾಲಿಯಾಗಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆಯಿಲ್ಲ. ಮೇಕ್ ಅಮೆರಿಕ, ಗ್ರೇಟ್ ಎಗೇನ್ ಅಭಿಯಾನವು ದೇಶದ ರಾಜಕೀಯ ವ್ಯವಸ್ಥೆಗೆ ಗಂಭೀರ ಬೆದರಿಕೆಯಾಗಿದೆ ಎಂದು ಆರೋಪಿಸಿದರು.