ಲಾಹೋರ್ (ಪಾಕಿಸ್ತಾನ): ಭಾರತದ ಖ್ಯಾತ ಕವಿ, ಗೀತೆ ರಚನೆಕಾರ ಜಾವೇದ್ ಅಖ್ತರ್ ಪಾಕಿಸ್ತಾನದ ನೆಲದಲ್ಲೇ ಅದೇ ದೇಶದ ವಿರುದ್ಧ ಚಾಟಿ ಬೀಸಿದ್ದಾರೆ. 26/11ರ ಮುಂಬೈ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳು ಹಾಗೂ ಸಂಚುಕೋರರು ಇನ್ನೂ ನಿಮ್ಮ ದೇಶದಲ್ಲಿ ಸ್ವತಂತ್ರವಾಗಿ ತಿರುಗಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಆಸ್ಕರ್ ರೇಸ್‌ನಲ್ಲಿ 'ಆರ್‌ಆರ್‌ಆರ್': ಬರಿಗಾಲಲ್ಲೇ ಅಮೆರಿಕಕ್ಕೆ ತೆರಳಿದ ರಾಮ್ ಚರಣ್
ಕಳೆದ ವಾರ ಲಾಹೋರ್‌ನಲ್ಲಿ ನಡೆದ ಫೈಜ್ ಉತ್ಸವದಲ್ಲಿ ಜಾವೇದ್ ಅಖ್ತರ್ ಪಾಲ್ಗೊಂಡಿದ್ದರು. ಈ ವೇಳೆ ಪಾಕಿಸ್ತಾನದ ಭಯೋತ್ಪಾದನೆ ಪ್ರಸ್ತಾಪಿಸಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ 26/11ರ ದಾಳಿಯ ಕುರಿತಾಗಿ ಭಾರತೀಯರ ಹೃದಯದಲ್ಲಿ ಅಡಗಿರುವ ನೋವಿನ ಬಗ್ಗೆ ಮಾತನಾಡಿ, ನೆರೆ ರಾಷ್ಟ್ರದ ನಡೆಯನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ.
ಸಭಿಕರ ಪ್ರಶ್ನೆಗೆ ಖಡಕ್ ಉತ್ತರ: ಪಾಕಿಸ್ತಾನದ ಸಭಿಕರೊಬ್ಬರು ಜಾವೇದ್ ಅಖ್ತರ್ ಅವರಿಗೆ, "ನೀವು ನಿಮ್ಮ ತಾಯ್ನಾಡಿಗೆ ಭೇಟಿ ನೀಡಿದಾಗ, ನಿಮ್ಮ ದೇಶದ ನಾಗರಿಕರಿಗೆ ನಾವು (ಪಾಕಿಸ್ತಾನದವರು) ಒಳ್ಳೆಯ ಜನರು. ನಾವು ಜನರ ಮೇಲೆ ಬಾಂಬ್ ಸ್ಫೋಟಿಸುವುದಿಲ್ಲ. ನಮಸ್ಕರಿಸುತ್ತೇವೆ ಮತ್ತು ಹೂಮಾಲೆ ಹಾಕಿ ಸತ್ಕರಿಸುತ್ತೇವೆ ಎಂದು ಹೇಳುತ್ತೀರಾ" ಎಂದು ಪ್ರಶ್ನಿಸುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಜಾವೇದ್, "ಪರಸ್ಪರರನ್ನು ದೂಷಿಸುವುದರಿಂದ ನಮ್ಮ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಉಭಯ ದೇಶಗಳ ಉದ್ವಿಗ್ನ ಪರಿಸ್ಥಿತಿಯನ್ನು ನಾವು ತಗ್ಗಿಸಬೇಕು. ನಾವು ಮುಂಬೈನವರು. ನಮ್ಮ ಮೇಲೆ ಹೇಗೆ ದಾಳಿ ನಡೆದಿತ್ತು ಎಂಬುದನ್ನು ನೋಡಿದ್ದೇವೆ. ಈ ದಾಳಿಕೋರರು ನಾರ್ವೆ ಅಥವಾ ಈಜಿಪ್ಟ್‌ನಿಂದ ಬಂದಿರಲಿಲ್ಲ. ಅವರು ನಿಮ್ಮ ರಾಷ್ಟ್ರದವರು. ಇಲ್ಲಿ ಇನ್ನೂ ಸ್ವತಂತ್ರವಾಗಿಯೇ ಸುತ್ತಾಡುತ್ತಿದ್ದಾರೆ. ಹೀಗಾಗಿ ನಮ್ಮ ಹಿಂದೂಸ್ತಾನಿಗಳ ಹೃದಯದಲ್ಲಿ ಕೋಪವಿದ್ದರೂ, ನೀವು ನಮ್ಮನ್ನು ದೂರಲು ಸಾಧ್ಯವಿಲ್ಲ" ಎಂದು ಚಾಟಿ ಬೀಸಿದರು.
ಇದೇ ವೇಳೆ, "ನಮ್ಮ ದೇಶದಲ್ಲಿ ನಾವು ನುಸ್ರತ್ (ಫತೇಹ್ ಅಲಿ ಖಾನ್) ಸಾಹಬ್ ಹಾಗೂ ಮೆಹದಿ ಹಸನ್ ಸಾಹಬ್ ಅವರ ಹಲವಾರು ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಆದರೆ, ಲತಾ ಮಂಗೇಶ್ಕರ್ ಅವರ ಒಂದೇ ಒಂದು ಕಾರ್ಯಕ್ರಮವನ್ನೂ ಆಯೋಜಿಸಲು ನಿಮಗೆ ಸಾಧ್ಯವಾಗಲಿಲ್ಲ" ಎಂದು ಜಾವೇದ್ ಅಖ್ತರ್ ಕಿಡಿ ಕಾರಿದರು.
ಜಾವೇದ್ ಹೇಳಿಕೆಗೆ ಮೆಚ್ಚುಗೆ: ಪಾಕಿಸ್ತಾನದ ನೆಲದಲ್ಲೇ ಆ ರಾಷ್ಟ್ರದ ಧೋರಣೆ ಬಗ್ಗೆ ಕುಟುಕಿರುವ ಜಾವೇದ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. "ನಾನು ಜಾವೇದ್ ಸಾಹಬ್ ಅವರ ಕವಿತೆ ಕೇಳುವಾಗಲೆಲ್ಲಾ ಇವರ ಮೇಲೆ ಮಾತೆ ಸರಸ್ವತಿಯ ಕೃಪೆ ಇಷ್ಟೊಂದು ಪ್ರಮಾಣದಲ್ಲಿರಲು ಕಾರಣವೇನು ಎಂದು ಅನ್ನಿಸುತ್ತಿತ್ತು. ಆದರೆ, ಮನುಷ್ಯನಲ್ಲಿ ಸತ್ಯ, ಸದ್ವಿಚಾರಗಳಿದ್ದರೆ ದೇವರ ಕೃಪೆ ತಾನಾಗಿಯೇ ಇರುತ್ತದೆ ಎಂದು ಗೊತ್ತಾಗುತ್ತದೆ. ಜೈ ಹಿಂದ್ ಜಾವೇದ್ ಅಖ್ತರ್, ಮನೆಗೆ ನುಗ್ಗಿ ಹೊಡೆದಿದ್ದೀರಾ" ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಟ್ವೀಟ್ ಮಾಡಿದ್ದಾರೆ.
ಮುಂಬೈ ಮೇಲೆ ಪಾಕ್ ದುಷ್ಕೃತ್ಯ: 2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 20 ಭದ್ರತಾ ಸಿಬ್ಬಂದಿ ಹಾಗೂ 26 ವಿದೇಶಿಯರು ಸೇರಿ 174 ಜನರು ಸಾವನ್ನಪ್ಪಿದ್ದರು. 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಲಷ್ಕರ್-ಎ-ತೊಯ್ಬಾದ ಹತ್ತು ಉಗ್ರರು ಪಾಕಿಸ್ತಾನದಿಂದ ಸಮುದ್ರ ಮಾರ್ಗವಾಗಿ ಮುಂಬೈಗೆ ಬಂದು ಸರಣಿ ದಾಳಿಗಳನ್ನು ನಡೆಸಿದ್ದರು.
ಇದನ್ನೂ ಓದಿ:ಗಡ್ಡ ಬೋಳಿಸಿದ ವಿದ್ಯಾರ್ಥಿಗಳು ವಜಾ: ಗಡ್ಡ ಕಡ್ಡಾಯಗೊಳಿಸಿ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ ಆದೇಶ