ಒಸಾಕಾ (ಟೋಕಿಯೋ):ಜಗತ್ತಿನ ಅನೇಕ ದೇಶಗಳು ಸಾರ್ವಜನಿಕ ಮತ್ತು ಜನನಿಬಿಡ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಿದ್ದು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿವೆ. ಆದಾಗ್ಯೂ, ಕೆಲವರು ನಿಯಮಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿ ದಂಡ ಹಾಕಿಸಿಕೊಳ್ಳುವುದು ನಿಂತಿಲ್ಲ. ಸಾಮಾನ್ಯವಾಗಿ ಹೀಗೆ ನಿಯಮ ಉಲ್ಲಂಘಿಸಿದವರಿಗೆ 100 ರಿಂದ 500 ರೂಪಾಯಿ ಅದಕ್ಕೂ ಮಿಗಿಲಾಗಿ ಅಂದರೆ 1,000 ರೂಪಾಯಿವರೆಗೂ ದಂಡ ವಿಧಿಸುವುದುಂಟು. ಆದರೆ ಇಲ್ಲೊಬ್ಬ ಸರ್ಕಾರಿ ಅಧಿಕಾರಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಧೂಮಪಾನ ಮಾಡಿದ್ದು 8.8 ಲಕ್ಷ ರೂಪಾಯಿ ದಂಡ ಕಟ್ಟಬೇಕಿದೆ.
ಇಷ್ಟೊಂದು ಪ್ರಮಾಣದ ದಂಡ ಹಾಕಿಸಿಕೊಂಡವರು ಜಪಾನ್ ದೇಶದ ಹಿರಿಯ ಸರ್ಕಾರಿ ಅಧಿಕಾರಿ. ಇವರು ಕಳೆದ 14 ವರ್ಷಗಳಲ್ಲಿ 4,500 ಬಾರಿ ಕರ್ತವ್ಯದ ಸಮಯದಲ್ಲಿ ಧೂಮಪಾನಕ್ಕಾಗಿ ವಿರಾಮ ತೆಗೆದುಕೊಂಡಿದ್ದಾರೆ. ಈ ಪ್ರಕರಣವನ್ನು ಕೊನೆಗೂ ಗಂಭೀರವಾಗಿ ಪರಿಗಣಿಸಿದ ಮೇಲಾಧಿಕಾರಿಗಳು ಇವರ ವಿರುದ್ಧ ಇಲಾಖಾ ತನಿಖೆ ಕೈಗೊಂಡು 14,700 ಸಿಂಗಾಪುರ್ ಡಾಲರ್ (8.8 ಲಕ್ಷ ಭಾರತೀಯ ರೂಪಾಯಿ) ದಂಡ ಹಾಕಿದ್ದಾರೆ.
ಒಸಾಕಾ ನಗರದ ಹಣಕಾಸು ವಿಭಾಗದಲ್ಲಿ ನಿರ್ದೇಶಕ ಮಟ್ಟದ ಅಧಿಕಾರಿ (61 ವಯಸ್ಸು) ಮತ್ತು ಇತರ ಇಬ್ಬರು ಸಹ ಅಧಿಕಾರಿಗಳು ಕಚೇರಿ ಕೆಲಸದ ಸಂದರ್ಭದಲ್ಲಿ ಧೂಮಪಾನ ಮಾಡುತ್ತಿದ್ದರು. ಕಾನೂನು ನಿಯಮಗಳನ್ನು ಮೀರುತ್ತಿದ್ದ ಈ ಮೂವರ ವಿರುದ್ಧ 2022ರಲ್ಲಿ, ಕಚೇರಿಗೆ ಬಂದಂತಹ ಒಂದಿಷ್ಟು ಜನರು ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇದರ ನಂತರ ಹಿರಿಯ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿ, ಮತ್ತೆ ಧೂಮಪಾನ ಮಾಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಆದರೂ ತಮ್ಮ ವರ್ತನೆ ಬದಲಿಸಿಕೊಳ್ಳದ ಅಧಿಕಾರಿಗಳು ನಿಯಮ ಮುರಿದು ಧೂಮಪಾನಕ್ಕೆ ವಿರಾಮ ಪಡೆಯುತ್ತಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಧಿಕಾರಿ ವಿರುದ್ಧ ಮತ್ತೆ ದೂರು ಬಂದಾಗ ಈ ಬಗ್ಗೆ ಮೇಲಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಧೂಮಪಾನ ಮಾಡಿಲ್ಲ ಎಂಬ ಸುಳ್ಳು ಉತ್ತರ ನೀಡಿದ್ದಾರೆ.