ಟೋಕಿಯೊ(ಜಪಾನ್): ಹೊಸ ವರ್ಷ 2024ರ ಮೊದಲ ದಿನ ಮಧ್ಯ ಜಪಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿ 24 ಜನ ಸಾವನ್ನಪ್ಪಿದ್ದಾರೆ. ಬದುಕುಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಲ್ಲಿನ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ಸಂಭವಿಸಿದ ಭೂಕಂಪದಿಂದ ಸುನಾಮಿ ಉಂಟಾಗುವ ಭೀತಿ ಇತ್ತು. ಆದರೆ, ಸುನಾಮಿ ಉಂಟಾಗುವುದಿಲ್ಲ, ದೊಡ್ಡ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಜನರು ಕೊಂಚ ನಿರಾಳರಾಗಿದ್ದಾರೆ. ಸುನಾಮಿ ಭೀತಿ ಇಲ್ಲವಾದರೂ ದೊಡ್ಡ ಅಲೆಗಳು ಬರುವ ಸಾಧ್ಯತೆ ಇರುವುದರಿಂದ ಕರಾವಳಿ ಪ್ರದೇಶದ ಜನರು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಲಾಗಿದೆ.
ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ಇದನ್ನು ಅಧಿಕೃತವಾಗಿ 2024 ನೋಟೋ ಪೆನಿನ್ಸುಲಾ ಭೂಕಂಪ ಎಂದು ಹೆಸರಿಸಿದೆ. ಸೋಮವಾರದಿಂದ ಕನಿಷ್ಠ 155 ಭೂಕಂಪಗಳಾಗಿವೆ. ಇಶಿಕಾವಾ ಪ್ರಾಂತ್ಯದ ನೋಟೋ ಪೆನಿನ್ಸುಲಾದಲ್ಲಿ ಸಂಜೆ 4:10ರ (ಸ್ಥಳೀಯ ಕಾಲಮಾನ) ಸುಮಾರಿಗೆ 10 ಕಿಲೋಮೀಟರ್ (6 ಮೈಲುಗಳು) ಆಳದ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದೆ.
ಸೋಮವಾರ ಸಂಜೆ ಮಧ್ಯ ಜಪಾನಿನ ನಗರ ವಾಜಿಮಾದಲ್ಲಿ ಭೂಕಂಪದ ನಂತರ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತು. 100ಕ್ಕೂ ಹೆಚ್ಚು ಅಂಗಡಿಗಳು ಮತ್ತು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಪರಮಾಣು ನಿಯಂತ್ರಣ ಪ್ರಾಧಿಕಾರದ ಪ್ರಕಾರ, ಇಶಿಕಾವಾ ಪ್ರಿಫೆಕ್ಚರ್‌ನಲ್ಲಿರುವ ಶಿಕಾ ಪರಮಾಣು ವಿದ್ಯುತ್ ಘಟಕದಲ್ಲಿ ಸ್ಫೋಟ ಸಂಭವಿಸಿದೆ.
ಸಾರ್ವಜನಿಕ ಸೇವೆ ವ್ಯತ್ಯಯ:ಸಾರ್ವಜನಿಕ ಸೇವೆಗಳು ಅಸ್ತವ್ಯಸ್ತವಾಗಿದೆ. ಇಶಿಕಾವಾ ಪ್ರಾಂತ್ಯದ ವಾಜಿಮಾ ನಗರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 30,000ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ ಬುಲೆಟ್ ರೈಲುಗಳನ್ನು ಸ್ಥಗಿತಗೊಳಿಸಲಾಯಿತು. ಸಂಜೆ ಹೊತ್ತಿಗೆ ರೈಲು ಸೇವೆ ಆರಂಭಿಸಲಾಗಿದೆ. ಹೆದ್ದಾರಿಗಳನ್ನು ಮುಚ್ಚಲಾಗಿತ್ತು. ಕೆಲವು ಕಡೆಗಳಲ್ಲಿ ನೀರಿನ ಪೈಪ್‌ಗಳು ಒಡೆದವು. ಪ್ರದೇಶದಲ್ಲಿ ಕೆಲವು ಸೆಲ್ ಫೋನ್ ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ.