ಟೋಕಿಯೋ(ಜಪಾನ್):ಕಳೆದ ವಾರ ಜಪಾನ್‌ನ ಪಶ್ಚಿಮ ಕರಾವಳಿಯಲ್ಲಿ ಸಂಭವಿಸಿದ ಭೂಕಂಪ ಮತ್ತು ಸಣ್ಣ ಪ್ರಮಾಣದ ಸುನಾಮಿಯು ಭಾರಿ ಅನಾಹುತ ಸೃಷ್ಟಿಸಿದ್ದು, ಮೃತರ ಸಂಖ್ಯೆ 126ಕ್ಕೆ ಏರಿಕೆ ಕಂಡಿದೆ. ಇನ್ನೂ 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ನೂರಾರು ಮನೆಗಳು ಧರಾಶಾಹಿಯಾಗಿವೆ. ರಸ್ತೆಗಳು ಬಿರುಕು ಬಿಟ್ಟು ಸಂಪರ್ಕ ಕಡಿದುಕೊಂಡಿವೆ. ಇದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ವಾಜಿಮಾ ನಗರವೊಂದರಲ್ಲಿ 69 ಸಾವುಗಳು ಸಂಭವಿಸಿವೆ. ಸುಜು ಎಂಬಲ್ಲಿ 38 ಜನರು ಬಲಿಯಾಗಿದ್ದಾರೆ. 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಲ್ಲಿ 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 200ಕ್ಕೂ ಅಧಿಕ ಜನರು ಇನ್ನೂ ಪತ್ತೆಯಾಗಿಲ್ಲ. ಕುಸಿದು ಬಿದ್ದ ಮನೆಯೊಂದರ ಕೆಳಗೆ 11 ಮಂದಿ ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ.
ಸತತ ಮಳೆ, ಹಿಮಪಾತ ಅಡ್ಡಿ:ಭೂಕಂಪ ಉಂಟಾದ ಬಳಿಕ, ಸುನಾಮಿ ಕೆಲ ಪ್ರದೇಶಗಳಲ್ಲಿ ಅನಾಹುತ ಸೃಷ್ಟಿಸಿದೆ. ಇದೀಗ ಸತತವಾಗಿ ಬೀಳುತ್ತಿರುವ ಮಳೆ ಮತ್ತು ಹಿಮಪಾತದಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಂಪನದಿಂದ ರಸ್ತೆಗಳು ಬಾಯ್ತೆರೆದುಕೊಂಡಿವೆ. ಕೆಲ ಪ್ರದೇಶಗಳಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಬಿರಗಳಲ್ಲಿ 30 ಸಾವಿರ ಜನರು:ಹಾನಿಗೀಡಾದ ಪ್ರದೇಶಗಳ 30 ಸಾವಿರಕ್ಕೂ ಅಧಿಕ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ನೀರು, ಆಹಾರ, ಔಷಧಿಗಳನ್ನು ಪೂರೈಕೆ ಮಾಡಲಾಗುತ್ತಿದೆ. ಕರಾವಳಿ ಪ್ರದೇಶದಲ್ಲಿ ಕಡಿತವಾಗಿದ್ದ ವಿದ್ಯುತ್ ಸಂಪರ್ಕವನ್ನು ಕ್ರಮೇಣವಾಗಿ ಪುನಃಸ್ಥಾಪಿಸಲಾಗಿದೆ. ನೀರಿನ ಸರಬರಾಜು ಇನ್ನೂ ಪೂರ್ಣಗೊಂಡಿಲ್ಲ.