ನವದೆಹಲಿ:ಪಕ್ಕದ ಪಾಕಿಸ್ತಾನದಲ್ಲಿ ರಾಜಕೀಯ ವಿಪ್ಲವ ಉಂಟಾಗಿದೆ. ಇನ್ನು ದಕ್ಷಿಣ ಭಾಗದಲ್ಲಿನ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಲಂಕಾ ದಿವಾಳಿಯ ಅಂಚಿನಲ್ಲಿದೆ. ಪಾಕ್ನಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನು ಇಲ್ಲ.
ಇವೆಲ್ಲ ಕಾರಣಗಳಿಂದ ಭಾರತದ ರಾಜತಾಂತ್ರಿಕತೆ ಎಂದೆಂದಿಗಿಂತಲೂ ಈಗ ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದೆ. ದಿವಾಳಿ ಅಂಚಿನಲ್ಲಿರುವ ಲಂಕಾಗೆ ಭಾರತ ನೆರವು ನೀಡಿದೆ. ಇನ್ನೊಂದೆಡೆ ಪಾಕ್ನಲ್ಲಿ ರಾಜಕೀಯ ವಿಪ್ಲವದಲ್ಲಿ ಸಿಲುಕಿರುವ ಇಮ್ರಾನ್ ಖಾನ್, ಭಾರತದ ಗುಣಗಾನ ಮಾಡಿದ್ದಾರೆ. ಅವರಂತೆ ನಮಗೂ ಸ್ವತಂತ್ರ ವಿದೇಶಾಂಗ ನೀತಿ ಬೇಕು ಎಂದು ಪ್ರಸ್ತಾಪಿಸಿದ್ದು, ಅಮೆರಿಕ ಸೇರಿ ಐರೋಪ್ಯ ರಾಷ್ಟ್ರಗಳ ವಿರುದ್ಧ ಹರಿಹಾಯ್ದಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದು, ಈ ಸಂದರ್ಭದಲ್ಲಿ ಅವರು ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು ಮತ್ತು ಪಾಕಿಸ್ತಾನದಲ್ಲಿನ ರಾಜಕೀಯ ಅಸ್ಥಿರತೆಯ ಬಗ್ಗೆ ಚರ್ಚಿಸುವ ಹಾಗೂ ಮಾಹಿತಿ ನೀಡುವ ಸಾಧ್ಯತೆಗಳಿವೆ.
ಶ್ರೀಲಂಕಾ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಧುಮುಕಿದೆ. ವಿದೇಶಿ ಕರೆನ್ಸಿಯ ತೀವ್ರ ಕೊರತೆ ಎದುರಾಗಿದ್ದು, ಇಂಧನ ಸೇರಿದಂತೆ ಅಗತ್ಯ ಆಮದುಗಳಿಗೆ ಹಣ ಪಾವತಿಸಲು ಸಾಧ್ಯವಾಗದಂತಾಗಿದೆ. ದೇಶದಲ್ಲಿ 13 ಗಂಟೆಗಳ ಕಾಲ ವಿದ್ಯುತ್ ಸಹ ಕಡಿತಗೊಂಡಿದೆ. ಭಾನುವಾರ ಶ್ರೀಲಂಕಾದ ಎಲ್ಲ ಕ್ಯಾಬಿನೆಟ್ ಸಚಿವರು ರಾಜೀನಾಮೆ ನೀಡಿದ ನಂತರ, ಅಧ್ಯಕ್ಷ ಗೋತಬಯ ರಾಜಪಕ್ಸೆ ಪ್ರತಿಪಕ್ಷಗಳು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ಸ್ವೀಕಾರ ಮಾಡುವಂತೆ ಆಹ್ವಾನ ನೀಡಿದ್ದಾರೆ. ಆರ್ಥಿಕ ಬಿಕ್ಕಟ್ಟು ಕೊನೆಗೊಳಿಸಲು ಸಹಾಯ ಮಾಡುವಂತೆ ಕೋರಿಕೆ ಸಲ್ಲಿಸಿದ್ದಾರೆ.
ಏತನ್ಮಧ್ಯೆ, ಪ್ರಧಾನಿ ಇಮ್ರಾನ್ ಖಾನ್ ಪದಚ್ಯುತಿ ಪ್ರಯತ್ನವನ್ನು ತಪ್ಪಿಸಿದ ನಂತರ ಮತ್ತು ಸಂಸತ್ತನ್ನು ವಿಸರ್ಜಿಸಿ ಹೊಸ ಚುನಾವಣೆ ಘೋಷಿಸಿದ ನಂತರ ಪಾಕಿಸ್ತಾನ ರಾಜಕೀಯ ಅಸ್ಥಿರತೆ ಎದುರಿಸುತ್ತಿದೆ. ಇಮ್ರಾನ್ ಖಾನ್ ನಡೆ ಅಲ್ಲಿನ ಪ್ರತಿಪಕ್ಷಗಳ ಕೋಪವನ್ನು ಮತ್ತಷ್ಟು ಹೆಚ್ಚಿಸಿದೆ, ಅಷ್ಟೇ ಅಲ್ಲ ಪಾಕ್ನಲ್ಲಿ ರಾಜಕೀಯ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳುವಂತೆ ಮಾಡಿದೆ.
ಇದನ್ನು ಓದಿ:1 ಕೆಜಿ ಅಕ್ಕಿಗೆ ₹220, 1 ಮೊಟ್ಟೆಗೆ ₹30, ತೆಂಗಿನ ಎಣ್ಣೆಗೆ ₹850! ಶ್ರೀಲಂಕಾದಲ್ಲಿ ಅಗತ್ಯವಸ್ತುಗಳು ದುಬಾರಿ