ವಾಷಿಂಗ್ಟನ್:ಪ್ರತ್ಯೇಕತಾವಾದಿ ಖಲಿಸ್ತಾನಿ ಉಗ್ರ ಹರ್ದೀಪ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಇರುವ ಬಿಕ್ಕಟ್ಟಿನ ನಡುವೆಯೇ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಅವರು ಜಾಗತಿಕ ಬೆಳವಣಿಗೆ ಹಾಗೂ 2+2 ಸಭೆ ಬಗ್ಗೆ ಚರ್ಚಿಸಿದರು.
ವಿದೇಶಾಂಗ ಸಚಿವ ಜೈಶಂಕರ್, ಪ್ರಸ್ತುತ ವಾಷಿಂಗ್ಟನ್ ಡಿಸಿಗೆ ಐದು ದಿನಗಳ ಅಧಿಕೃತ ಪ್ರವಾಸದಲ್ಲಿದ್ದಾರೆ. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಜಿ-20 ಶೃಂಗಸಭೆಯ ನಂತರ ಉಭಯ ದೇಶಗಳ ನಡುವಿನ ಅತ್ಯುನ್ನತ ಮಟ್ಟದ ಮಾತುಕತೆ ಇದಾಗಿದೆ.
"ಇಂದು ವಿದೇಶಾಂಗ ಇಲಾಖೆಯಲ್ಲಿ ನನ್ನ ಸ್ನೇಹಿತ ಯುಎಸ್ ಸ್ಟೇಟ್ ಸೆಕ್ರೆಟರಿ ಬ್ಲಿಂಕೆನ್ ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ಕಳೆದ ಜೂನ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಮಹತ್ತರ ಚರ್ಚೆ ನಡೆದಿದೆ. ಜಾಗತಿಕ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು" ಎಂದು ಜೈಶಂಕರ್ ಶುಕ್ರವಾರ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತ-ಯುಎಸ್ 2+2 ಸಚಿವರ ಸಂವಾದದ ಐದನೇ ಆವೃತ್ತಿಯನ್ನು ಭಾರತ ಆಯೋಜಿಸಲಾಗುವುದು ಎಂದು ಜೈಶಂಕರ್ ಗುರುವಾರ ಪ್ರಕಟಿಸಿದ್ದಾರೆ. ಸಭೆಯ ದಿನಾಂಕವನ್ನು ಅವರು ಬಹಿರಂಗಪಡಿಸದಿದ್ದರೂ, ನವೆಂಬರ್ ಮೊದಲಾರ್ಧದಲ್ಲಿ ಸಚಿವರ ಸಂವಾದ ನಡೆಯಲಿದೆ ಎಂದು ತಿಳಿದು ಬಂದಿದೆ. ಯುಎಸ್ ನಿಯೋಗವನ್ನು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಜತೆಗೆ ಬ್ಲಿಂಕನ್ ಪ್ರತಿನಿಧಿಸುತ್ತಾರೆ. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ನಿಯೋಗವನ್ನು ಪ್ರತಿನಿಧಿಸಲಿದ್ದಾರೆ. ಏಪ್ರಿಲ್ 11 ರಂದು ವಾಷಿಂಗ್ಟನ್ ಡಿಸಿಯಲ್ಲಿ ಕೊನೆಯ 2+2 ಸದಸ್ಯರ ಸಭೆ ನಡೆಸಲಾಯಿತು. ಮೊದಲ 2+2 ಸಭೆ ಸೆಪ್ಟೆಂಬರ್ 6, 2018ರಂದು ನವದೆಹಲಿಯಲ್ಲಿ ನಡೆದಿತ್ತು.
ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ(ಭಾರತ ಮತ್ತು ಕೆನಡಾ) ನಡುವೆ ಬಿಕ್ಕಟ್ಟು ಉದ್ಭವಿಸಿದೆ. ನಿಜ್ಜರ್ ಹತ್ಯೆಯ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದಾರೆ. ಆದರೆ ಕೆನಡಾದ ಆರೋಪಗಳನ್ನು ಭಾರತ "ಅಸಂಬದ್ಧ" ಮತ್ತು "ಪ್ರೇರಿತ" ಎಂದು ಸರಾಸಗಟಾಗಿ ತಿರಸ್ಕರಿಸಿದೆ.
ವಿದೇಶಾಂಗ ಇಲಾಖೆಯ ಫಾಗ್ಗಿ ಬಾಟಮ್ ಪ್ರಧಾನ ಕಚೇರಿಯಲ್ಲಿ ಜೈಶಂಕರ್ ಅವರನ್ನು ಬ್ಲಿಂಕೆನ್ ಸ್ವಾಗತಿಸಿದರು. ಬಳಿಕ ಮಾತನಾಡಿದ ಅವರು 'ನನ್ನ ಸ್ನೇಹಿತ ಮತ್ತು ಸಹೋದ್ಯೋಗಿ, ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಇಲ್ಲಿ ವಿದೇಶಾಂಗ ಇಲಾಖೆ ವಾಷಿಂಗ್ಟನ್‌ಗೆ ಸ್ವಾಗತಿಸಲು ಸಂತೋಷವಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಜನರಲ್ ಅಸೆಂಬ್ಲಿಯಲ್ಲಿ ಕಳೆದ ವಾರಗಳಲ್ಲಿ ನಾವು ಉತ್ತಮ ಚರ್ಚೆಗಳನ್ನು ನಡೆಸಿದ್ದೇವೆ. ಇಂದು ಮಧ್ಯಾಹ್ನ ಅದರ ಬಗ್ಗೆ ಚರ್ಚೆ ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ' ಎಂದು ತಿಳಿಸಿದರು. ಇನ್ನು ಜಿ20 ಶೃಂಗಸಭೆಯಲ್ಲಿ ಬೆಂಬಲ ನೀಡಿದ ಅಮೆರಿಕಕ್ಕೆ ನಾವು ಧನ್ಯವಾದ ಹೇಳುತ್ತೇವೆ ಎಂದು ಜೈಶಂಕರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಭವಿಷ್ಯದ ದೊಡ್ಡ ಸವಾಲುಗಳನ್ನು ಎದುರಿಸಲು ಭಾರತ-ಅಮೆರಿಕ ಸಹಭಾಗಿತ್ವ ಅಗತ್ಯ : ಬ್ಲಿಂಕೆನ್