ಬೀಜಿಂಗ್ :ರೋಮ್ನ ಸಂದೇಹಗಳ ಹೊರತಾಗಿಯೂ, ಬೀಜಿಂಗ್ ನೇತೃತ್ವದ ಬೆಲ್ಟ್ ಅಂಡ್ ರೋಡ್ ಉಪಕ್ರಮದ ಅಡಿಯಲ್ಲಿ ಇಟಲಿಯೊಂದಿಗಿನ ಸಹಕಾರವು ಫಲಪ್ರದವಾಗಿದೆ ಮತ್ತು ಇದರ ಮೂಲಕ ಉತ್ತಮ ಗುಣಮಟ್ಟದ ಇಟಾಲಿಯನ್ ಉತ್ಪನ್ನಗಳು ಚೀನಾದ ಸಾವಿರಾರು ಮನೆಗಳನ್ನು ಪ್ರವೇಶಿಸಿವೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ. "ಪ್ರಾಚೀನ ಸಿಲ್ಕ್ ರೂಟ್ ಕಾಲದಿಂದ ಸಾಂಪ್ರದಾಯಿಕವಾಗಿ ಮುಂದುವರಿದುಕೊಂಡು ಬಂದಿರುವ ಸಾವಿರ ವರ್ಷಗಳ ನಮ್ಮ ಸ್ನೇಹ ಉಳಿದುಕೊಂಡಿದೆ" ಎಂದು ವಾಂಗ್ ಸೋಮವಾರ ಬೀಜಿಂಗ್ಗೆ ಭೇಟಿ ನೀಡಿದ ಇಟಲಿಯ ಉಪ ಪ್ರಧಾನಿ ಆಂಟೋನಿಯೊ ತಜಾನಿ ಅವರಿಗೆ ತಿಳಿಸಿದರು.
"ಕಳೆದ ಐದು ವರ್ಷಗಳಲ್ಲಿ, ಚೀನಾ ಮತ್ತು ಇಟಲಿ ನಡುವಿನ ವ್ಯಾಪಾರ ಪ್ರಮಾಣವು 50 ಬಿಲಿಯನ್ ಡಾಲರ್ನಿಂದ ಸುಮಾರು 80 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ ಮತ್ತು ಚೀನಾಕ್ಕೆ ಇಟಲಿಯ ರಫ್ತು ಸುಮಾರು ಶೇಕಡಾ 30 ರಷ್ಟು ಹೆಚ್ಚಾಗಿದೆ" ಎಂದು ವಾಂಗ್ ಹೇಳಿದರು.
2019 ರಲ್ಲಿ ಇಟಲಿಯು ಚೀನಾದ ಬೆಲ್ಟ್ ಅಂಡ್ ರೋಡ್ಗೆ ಸೇರಿದ ಮೊದಲ ಪ್ರಮುಖ ಪಾಶ್ಚಿಮಾತ್ಯ ರಾಷ್ಟ್ರವಾಯಿತು. ಬೆಲ್ಟ್ ಅಂಡ್ ರೋಡ್ ಇದು ಜಾಗತಿಕ ವ್ಯಾಪಾರ ಮತ್ತು ಮೂಲಸೌಕರ್ಯ ಉಪಕ್ರಮವಾಗಿದೆ. ಇದು ಸಹಸ್ರಮಾನಗಳ ಹಿಂದೆ ಸಾಮ್ರಾಜ್ಯಶಾಹಿ ಚೀನಾ ಮತ್ತು ಪಶ್ಚಿಮವನ್ನು ಸಂಪರ್ಕಿಸಿದ ಹಳೆಯ ಸಿಲ್ಕ್ ರೂಟ್ ರಸ್ತೆಯ ಕಲ್ಪನೆಯನ್ನು ಆಧರಿಸಿದೆ. 2019 ರಲ್ಲಿ ಇಟಲಿ ಈ ಯೋಜನೆಯ ಪಾಲುದಾರನಾಗಲು ಸಹಿ ಹಾಕಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಯೋಜನೆಯಲ್ಲಿ ತನ್ನ ಸದಸ್ಯತ್ವವನ್ನು ಮುಂದುವರಿಸುವ ಬಗ್ಗೆ ಇಟಲಿ ಉತ್ಸುಕವಾಗಿಲ್ಲ.