ಗಾಜಾ: ಕದನ ವಿರಾಮ ಮುಗಿದ ನಂತರ ಗಾಜಾ ಮೇಲೆ ಇಸ್ರೇಲ್ ಮತ್ತೆ ಬಾಂಬ್ ದಾಳಿ ನಡೆಸುತ್ತಿದೆ. ಕದನ ವಿರಾಮವನ್ನು ಮುಂದುವರಿಸುವಂತೆ ವಿಶ್ವಸಂಸ್ಥೆ ಎರಡೂ ಕಡೆಯವರನ್ನು ಕೇಳಿಕೊಂಡರೂ, ವೈಮಾನಿಕ ದಾಳಿಗಳು ಮುಂದುವರಿದಿವೆ. ಇದರ ಪರಿಣಾಮವಾಗಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 178 ಪ್ಯಾಲೆಸ್ಟೈನ್ ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಇಲಾಖೆ ತಿಳಿಸಿದೆ. ಮತ್ತೊಂದೆಡೆ, ಹಮಾಸ್‌ನ ಐವರು ಒತ್ತೆಯಾಳುಗಳನ್ನು ಕೊಲ್ಲಲಾಗಿದೆ ಎಂದು ಆ ಗುಂಪು ಖಚಿತಪಡಿಸಿದೆ. ಈ ದಾಳಿಯಿಂದ ಗಾಜಾದ ಆಸ್ಪತ್ರೆಗಳಲ್ಲಿ ಮತ್ತೆ ಕೆಟ್ಟ ಪರಿಸ್ಥಿತಿ ಎದುರಾಗಲಿದೆ ಎಂದು ವಿಶ್ವಸಂಸ್ಥೆ ಏಜೆನ್ಸಿಗಳು ಎಚ್ಚರಿಕೆ ನೀಡಿವೆ.
ಇತ್ತೀಚೆಗೆ ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಮತ್ತು ಒತ್ತೆಯಾಳು ವರ್ಗಾವಣೆ ಒಪ್ಪಂದದ ಪ್ರಕ್ರಿಯೆ ಶರುವಾಗಿತ್ತು. ಹೀಗಾಗಿ ಆ ಪ್ರದೇಶಗಳಲ್ಲಿ ಒಂದು ವಾರದವರೆಗೆ ಯಾವುದೇ ದಾಳಿಗಳು ನಡೆದಿರಲಿಲ್ಲ. ಮೊದಲು ಒಪ್ಪಂದವು ಆರಂಭದಲ್ಲಿ ಕೇವಲ ನಾಲ್ಕು ದಿನಕ್ಕೆ ಸೀಮಿತವಾಗಿತ್ತು. ನಂತರ ಒತ್ತೆಯಾಳುಗಳ ಬಿಡುಗಡೆಗಾಗಿ ಕದನ ವಿರಾಮ ಅವಧಿಯನ್ನು ವಿಸ್ತರಿಸಲಾಯಿತು. ಇದರಿಂದಾಗಿ ಎರಡೂ ಕಡೆಯಿಂದ ಯಾವುದೇ ದಾಳಿ ವರದಿಯಾಗಿರಲಿಲ್ಲ. ಈ ಗಡುವು ಶುಕ್ರವಾರ ಬೆಳಗ್ಗೆ ಕೊನೆಗೊಂಡಿದೆ.
ಇನ್ನೂ ಕೆಲವು ದಿನಗಳ ಕಾಲ ಕದನ ವಿರಾಮವನ್ನು ಮುಂದುವರಿಸುವಂತೆ ಅಂತಾರಾಷ್ಟ್ರೀಯ ಸಮುದಾಯದ ಒತ್ತಡದ ನಡುವೆಯೂ ಅದು ಪುನರಾರಂಭವಾಗಿದೆ. ಹಮಾಸ್ ಆರಂಭಿಕ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಇಸ್ರೇಲ್ ವೈಮಾನಿಕ ದಾಳಿ ಪ್ರಾರಂಭಿಸಿತು. ನಿರಂತರ ಗುಂಡಿನ ದಾಳಿಗೆ ಅಮೆರಿಕ ಮತ್ತು ವಿಶ್ವಸಂಸ್ಥೆ ಪ್ರತಿಕ್ರಿಯಿಸಿವೆ. ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಮತ್ತು ಶ್ವೇತಭವನವು ಗುಂಡಿನ ದಾಳಿಯನ್ನು ನಿಲ್ಲಿಸಲು ಮತ್ತು ಗಾಜಾದಲ್ಲಿ ಕದನ ವಿರಾಮವನ್ನು ಪುನಃಸ್ಥಾಪಿಸಲು ಎರಡೂ ಕಡೆಯವರಿಗೆ ಕರೆ ನೀಡಿದೆ. ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಲು ಇಸ್ರೇಲ್, ಈಜಿಪ್ಟ್ ಮತ್ತು ಕತಾರ್‌ನೊಂದಿಗೆ ಕೆಲಸ ಮಾಡುತ್ತಿದೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು ತಿಳಿಸಿದ್ದಾರೆ.