ಡಮಾಸ್ಕಸ್(ಸಿರಿಯಾ):ಪ್ರಬಲ ಭೂಕಂಪಕ್ಕೆ ತುತ್ತಾಗಿ ಸಾವಿರಾರು ಜನರನ್ನು ಕಳೆದುಕೊಂಡು ನಲುಗಿರುವ ಸಿರಿಯಾದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿ ಗಾಯದ ಮೇಲೆ ಬರೆ ಎಳೆದಿದೆ. ವೈಮಾನಿಕ ದಾಳಿಯಲ್ಲಿ ನಾಗರಿಕರು, ಅಧಿಕಾರಿಗಳು ಸೇರಿ 15 ಜನರು ಮೃತಪಟ್ಟಿದ್ದಾರೆ. ವಸತಿ ಪ್ರದೇಶ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದ್ದು, ಎರಡು ವಾರಗಳ ಅಂತರದಲ್ಲಿ ನಡೆಸಿದ 2ನೇ ದಾಳಿ ಇದಾಗಿದೆ.
ಬಿಗಿ ಭದ್ರತೆ ಇರುವ ಪ್ರದೇಶದ ಮೇಲೆಯೇ ಇಸ್ರೇಲ್ ದಾಳಿ ನಡೆಸಿದೆ. ಇದರಿಂದ ವಸತಿ ಸಮುಚ್ಛಯ ಧರೆಗೆ ಉರುಳಿ ಬಿದ್ದಿದೆ. ಡಮಾಸ್ಕಸ್ನ ಸುತ್ತಲೂ ಇರಾನ್ ದಾಳಿ ನಡೆಸುತ್ತಲೇ ಇರುತ್ತದೆ. ಆದರೆ, ಇದೇ ಸಲ ವಸತಿ ಪ್ರದೇಶದ ಮೇಲೆ ವಾಯುದಾಳಿ ನಡೆಸಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಮಾನವ ಹಕ್ಕುಗಳ ಕೇಂದ್ರದ ಪಕ್ಕದಲ್ಲೇ ಈ ದಾಳಿ ನಡೆಸಲಾಗಿದೆ. ಇದರಿಂದ ನಾಗರಿಕರು ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ. ಹಿರಿಯ ಭದ್ರತಾ ಅಧಿಕಾರಿಗಳು, ಭದ್ರತಾ ಶಾಖೆಗಳು ಮತ್ತು ಗುಪ್ತಚರ ಪ್ರಧಾನ ಕಚೇರಿಗಳು ಇರುವ ಹೆಚ್ಚಿನ ಭದ್ರತಾ ಪ್ರದೇಶವಾದ ಕಾಫ್ರ್ ಸೌಸಾದಲ್ಲಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಉದ್ದೇಶಿತ ದಾಳಿಯು ಜನನಿಬಿಡ ಪ್ರದೇಶದ ಹಲವಾರು ಕಟ್ಟಡಗಳನ್ನು ಹಾನಿಗೊಳಿಸಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 12:30 ರ ಸುಮಾರಿಗೆ ದೊಡ್ಡ ಸ್ಫೋಟಗಳು ಕೇಳಿಬಂದವು. ಇಸ್ರೇಲಿ ಪಡೆಗಳು ಆಕ್ರಮಿಸಿಕೊಂಡ ಗೋಲನ್ ಹೈಟ್ಸ್‌ನ ಕಡೆಯಿಂದ ಡಮಾಸ್ಕಸ್ ಮತ್ತು ಅದರ ಸುತ್ತಮುತ್ತಲಿನ ಹಲವಾರು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದವು. ದಾಳಿಯಲ್ಲಿ 10 ಅಂತಸ್ತಿನ ಕಟ್ಟಡ ತೀವ್ರ ಹಾನಿಗೊಳಗಾಗಿದೆ ಎಂದು ಸಿರಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.