ಜೆರುಸಲೇಂ:ಹಮಾಸ್ ಉಗ್ರರ ದಮನಕ್ಕೆ ಗಾಜಾ ಪಟ್ಟಿಯನ್ನು ತನ್ನ ಬಾಂಬ್, ರಾಕೆಟ್ಗಳಿಂದಲೇ ಛಿದ್ರ ಮಾಡುತ್ತಿರುವ ಸೇನೆ, ಅಗತ್ಯ ಬಿದ್ದಲ್ಲಿ 'ಪರಮಾಣು ಬಾಂಬ್' ಬಳಸಲಿದೆ ಎಂದು ಇಸ್ರೇಲ್ ಸಚಿವರೊಬ್ಬರು ವಿವಾದಿತ ಹೇಳಿಕೆ ನೀಡಿ, ಬಳಿಕ ವಾಪಸ್ ಪಡೆದಿದ್ದಾರೆ. ಇದರ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಚಿವರನ್ನು ವಜಾ ಮಾಡಿದ್ದಾರೆ.
ಹಮಾಸ್ ಆಳ್ವಿಕೆಯಲ್ಲಿರುವ ಗಾಜಾ ಪಟ್ಟಿಯ ಮೇಲೆ ಪರಮಾಣು ಬಾಂಬ್ ಹಾಕುವುದು ಸೇನೆಯ ಆಯ್ಕೆಯಾಗಿದೆ. ಗಾಜಾಕ್ಕೆ ಮಾನವೀಯ ನೆರವು ನೀಡುವ ಅಗತ್ಯವಿಲ್ಲ. ಅಲ್ಲಿ ಹೋರಾಟಗಾರರು ಇಲ್ಲ ಎಂದು ಸಚಿವ ಅಮಿಚೈ ಎಲಿಯಾಹು ಟೀಕಿಸಿದ್ದರು. ಇದು ಇಸ್ರೇಲ್ನಲ್ಲೇ ವಿರೋಧಕ್ಕೆ ಕಾರಣವಾಗಿದೆ. ಪ್ರಧಾನಿ ನೆತನ್ಯಾಹು ತಕ್ಷಣವೇ ಕ್ರಮಕ್ಕೆ ಮುಂದಾಗಿ ಅನಿರ್ದಿಷ್ಟಾವಧಿಗೆ ಸಚಿವರನ್ನು ಸರ್ಕಾರಿ ಸಭೆಗಳಿಂದ ಅಮಾನತುಗೊಳಿಸಿದ್ದಾರೆ.
ಹೇಳಿಕೆ ವಾಪಸ್ ಪಡೆದ ಸಚಿವ:ತಮ್ಮ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಸಚಿವ ಅಮಿಚೈ ಎಲಿಯಾಹು ಉಲ್ಟಾ ಹೊಡೆದಿದ್ದಾರೆ. ಪರಮಾಣು ಬಾಂಬ್ ಬಳಕೆ ಹೇಳಿಕೆ ಒಂದು ರೂಪಕವಾಗಿದೆ. ಇದು ಸಂವೇದನಾಶೀಲ ಜನರಿಗೆ ಅರ್ಥವಾಗುತ್ತದೆ. ಭಯೋತ್ಪಾದನೆಯ ವಿರುದ್ಧ ಬಲವಾದ ಮತ್ತು ಸಮರ್ಪಕ ಪ್ರತಿಕ್ರಿಯೆ ಅಗತ್ಯವಾಗಿದೆ. ಹಮಾಸ್ ನಡೆಸುತ್ತಿರುವ ಭಯೋತ್ಪಾದನೆ ನಾಜಿಗಳು ನಡೆಸುತ್ತಿರುವ ಮಾದರಿಯಲ್ಲಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದಿಂದ ಮಾತ್ರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯ. ಇದೇ ವೇಳೆ ಸೆರೆಯಾಳುಗಳನ್ನು ಜೀವಂತವಾಗಿ ಸುರಕ್ಷಿತವಾಗಿ ವಾಪಸ್ ಕರೆತರಲು ಇಸ್ರೇಲ್ ಸರ್ಕಾರ ಶ್ರಮಿಸುತ್ತಿದೆ ಎಂದು ವಿವಾದ ತಗ್ಗಿಸುವ ಪ್ರಯತ್ನ ಮಾಡಿದ್ದಾರೆ.
ಸಚಿವನ ಅಮಾನತು:ಸಚಿವರ ಹೇಳಿಕೆಯಿಂದ ಸರ್ಕಾರದ ಮೇಲೆ ಒತ್ತಡ ಉಂಟಾದ ಕಾರಣ, ಪ್ರಧಾನಿ ನೆತನ್ಯಾಹು ಅವರು ಅನಿರ್ದಿಷ್ಟಾವಧಿಗೆ ಸರ್ಕಾರಿ ಸಭೆಗಳಿಂದ ಸಚಿವ ಎಲಿಯಾಹು ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಎಲಿಯಾಹು ಅವರು ಯುದ್ಧಕಾಲದ ನಿರ್ಧಾರ ಕೈಗೊಳ್ಳುವಲ್ಲಿ ತೊಡಗಿರುವ ಭದ್ರತಾ ಕ್ಯಾಬಿನೆಟ್‌ನ ಭಾಗವಾಗಿರುವುದಿಲ್ಲ ಎಂದು ಪ್ರಧಾನಿ ಕಚೇರಿ ಹೇಳಿಕೆ ನೀಡಿದೆ.
ಪ್ಯಾಲೆಸ್ಟೈನ್ ಅಧ್ಯಕ್ಷ- ಅಮೆರಿಕ ವಿದೇಶಾಂಗ ಸಚಿವರ ಭೇಟಿ:ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಪ್ಯಾಲೆಸ್ಟೈನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರನ್ನು ಭಾನುವಾರ ಭೇಟಿ ಮಾಡಿದರು. ಇಸ್ರೇಲಿ ಯುದ್ಧವಿಮಾನಗಳು ಗಾಜಾ ಪಟ್ಟಿಯಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ದಾಳಿ ಮಾಡಿದ ಕೆಲವೇ ಗಂಟೆಗಳ ನಂತರ ಬ್ಲಿಂಕನ್ ವೆಸ್ಟ್ಬ್ಯಾಂಕ್ಗೆ ಭೇಟಿ ನೀಡಿದ್ದು, ಇಸ್ರೇಲ್ ಪ್ರತಿಭಟನೆಗೆ ಕಾರಣವಾಯಿತು. ಇದರ ಬಳಿಕ ಅಮೆರಿಕ ಯುದ್ಧದಲ್ಲಿ ಇಸ್ರೇಲ್ ಬೆಂಬಲಕ್ಕಿದೆ ಎಂದು ಘೋಷಿಸಿತು. ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಇಸ್ರೇಲ್ ದಾಳಿಗೆ ಈವರೆಗೆ 9,448 ಜನರು ಹತರಾಗಿದ್ದಾರೆ.
ಇದನ್ನೂ ಓದಿ:ಇಸ್ರೇಲ್ ದಾಳಿಗೆ ಪ್ರತಿ 10 ನಿಮಿಷಕ್ಕೆ ಒಂದು ಮಗು ಸಾವು: ಗಾಜಾ ಆರೋಗ್ಯ ಸಚಿವಾಲಯ