ಜೆರುಸಲೇಂ:ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ 9ನೇ ದಿನಕ್ಕೆ ಕಾಲಿಟ್ಟಿದ್ದು, ಭೀಕರ ದಾಳಿಯಲ್ಲಿ 2,670 ಪ್ಯಾಲೆಸ್ಟೈನಿಯನ್ನರು ಸಾವನ್ನಪ್ಪಿ, 9,600 ಮಂದಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ 6 ಮಂದಿ ಹಮಾಸ್ ಮುಖಂಡರು ಹತರಾಗಿದ್ದಾರೆ ಎಂದು ಇಸ್ರೇಲ್ ತಿಳಿಸಿದೆ. ಇನ್ನೊಂದೆಡೆ, ಹಮಾಸ್ ಉಗ್ರರು ಗಡಿ ದಾಟಿ ಬಂದು ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸುತ್ತಿರುವ ಚಿತ್ರ, ವಿಡಿಯೋಗಳನ್ನು ಇಸ್ರೇಲ್ ಹಂಚಿಕೊಂಡಿದೆ.
ದಾಳಿಯ ವೇಳೆ ಉಗ್ರರೇ ಮಾಡಿದ ವಿಡಿಯೋಗಳನ್ನು ಇಸ್ರೇಲ್ ಪಡೆ ತನ್ನ ಅಧಿಕೃತ ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದೆ. ಅದರಲ್ಲಿ ಬಂದೂಕುದಾರಿ ಉಗ್ರರು ಇಸ್ರೇಲಿ ಜನರ ಮೇಲೆ ಮನಬಂದಂತೆ ಗುಂಡಿನ ದಾಳಿ ಮಾಡುತ್ತಿರುವುದನ್ನು ಕಾಣಬಹುದು. ಮನೆಗಳಿಗೆ ನುಗ್ಗುವುದು, ಎದುರು ಸಿಕ್ಕ ಜನರ ಮೇಲೆಲ್ಲ ಗುಂಡು ಹಾರಿಸುತ್ತಿರುವುದು ಅದರಲ್ಲಿದೆ. ಮನೆಯೊಂದರ ಮೇಲೆ ರಾಕೆಟ್ ದಾಳಿಯಾಗಿ ಇಡೀ ಮನೆ ಧ್ವಂಸವಾಗಿದ್ದು, ಈ ಮನೆ ಪ್ರೀತಿಯಿಂದ ತುಂಬಿತ್ತು. ಹಮಾಸ್ ದಾಳಿಗೆ ಹಾಳು ಕೊಂಪೆಯಾಗಿದೆ ಎಂದು ಬರೆದುಕೊಂಡಿದೆ.
ಗಾಜಾದ ಪರಿಸ್ಥಿತಿ:ದಕ್ಷಿಣ ಗಾಜಾದ ಕಡೆಗೆ ಜನರು ಸ್ಥಳಾಂತರವಾಗಿದ್ದರಿಂದ ಇಲ್ಲೂ ಆಹಾರ, ನೀರಿಗೆ ಹಾಹಾಕಾರ ಉಂಟಾಗಿದೆ ಎಂದು ವಿಶ್ವಸಂಸ್ಥೆಯ ಪ್ಯಾಲೆಸ್ಟೈನ್ ನಿರಾಶ್ರಿತರ ಸಂಸ್ಥೆ ಹೇಳಿದೆ. ಇಲ್ಲಿನ ಶಾಲೆಗಳು ಮತ್ತು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿರುವ ಜನರ ಸಂಖ್ಯೆಯು ಅಗಾಧವಾಗಿದೆ. ಅವರಿಗೆ ಸೂಕ್ತ ಸೌಕರ್ಯ ಮತ್ತು ಆಹಾರದ ವ್ಯವಸ್ಥೆ ಇಲ್ಲವಾಗಿದೆ ಎಂದಿದೆ.
ಈ ಭಾಗದಲ್ಲಿ ಸದ್ಯ ಲಭ್ಯವಿರುವ ಆಹಾರ ಅಥವಾ ಔಷಧವೂ ಕೆಲವೇ ದಿನಗಳಲ್ಲಿ ಖಾಲಿಯಾಗಲಿದೆ. ಇಸ್ರೇಲ್ ಭಯಾನಕ ದಾಳಿಗೆ ವಾರದಲ್ಲಿ 10 ಲಕ್ಷಕ್ಕೂ ಅಧಿಕ ಜನರು ಇಲ್ಲಿಗೆ ಬಂದಿದ್ದಾರೆ. ದಾಳಿ ಮತ್ತು ಒತ್ತೆಯಾಳುಗಳನ್ನು ಇಟ್ಟುಕೊಳ್ಳುವುದು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಕನಿಷ್ಠ 4 ಲಕ್ಷ ಸ್ಥಳಾಂತರಗೊಂಡ ಜನರು ವಿಶ್ವಸಂಸ್ಥೆಯ ನಿರಾಶ್ರಿತರ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ. ಅನೈರ್ಮಲ್ಯ ಮತ್ತು ಆಹಾರ ಅಭದ್ರತೆ ಕಾಡುತ್ತಿದೆ ಎಂದು ಅವರು ತಿಳಿಸಿದರು.
ಗಾಜಾದಲ್ಲಿ ಬಾಂಬ್, ರಾಕೆಟ್ ದಾಳಿಗೆ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಾಕಷ್ಟು ಜನರು ಹತರಾಗಿದ್ದಾರೆ. ಸತತ ಶೆಲ್ ದಾಳಿಯಿಂದಾಗಿ ಕುಡಿಯುವ ನೀರೂ ಸಿಗದಾಗಿದೆ. ಕಳೆದ ಹಲವು ಗಂಟೆಗಳಿಂದ, ನಾವು ಕುಡಿಯುವ ನೀರಿಗಾಗಿ ಹುಡುಕುತ್ತಿದ್ದೇವೆ. ಇಸ್ರೇಲ್ನ ದಾಳಿಗೆ ಸಿಲುಕುವ ಭಯವೂ ಇದೆ ಎಂದು ಮೊಹಮ್ಮದ್ ಅಬು ಮುಘೈಸೀಬ್ ಎಂಬವರು ಹೇಳಿದರು.
ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ- ಹಮಾಸ್ ಉಗ್ರರಿಗೆ ವಿಶ್ವಸಂಸ್ಥೆ ಮನವಿ:ವಿಶ್ವಸಂಸ್ಥೆಯ ಜನರಲ್ ಸೆಕ್ರೆಟರಿ ಆಂಟೋನಿಯೊ ಗುಟೆರೆಸ್ ಅವರು, ಒತ್ತೆಯಾಳಾಗಿಟ್ಟುಕೊಂಡವರನ್ನು ಷರತ್ತುಗಳಿಲ್ಲದೇ ಬಿಡುಗಡೆ ಮಾಡಲು ಹಮಾಸ್ ಉಗ್ರರಲ್ಲಿ ಮನವಿ ಮಾಡಿದ್ದಾರೆ. ಗಾಜಾದಲ್ಲಿ ಸಿಲುಕಿರುವ ಜನರಿಗೆ ಈಜಿಪ್ಟ್, ಜೋರ್ಡಾನ್, ವೆಸ್ಟ್ ಬ್ಯಾಂಕ್ ಮತ್ತು ಇಸ್ರೇಲ್‌ನಿಂದ ಆಹಾರ, ನೀರು, ವೈದ್ಯಕೀಯ ಸವಲತ್ತು ಸೇರಿದಂತೆ ಇತರ ಅವಶ್ಯಕಗಳನ್ನು ಸರಬರಾಜು ಮಾಡಲು ಕೋರಿದ್ದಾರೆ.
ಇದನ್ನೂ ಓದಿ:ಮತ್ತೆ ಇಸ್ರೇಲ್ಗೆ ಬಂದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ; ಕದನ ವಿರಾಮವಿಲ್ಲ ಎಂದ ಇಸ್ರೇಲ್