ಜೆರುಸಲೇಂ :ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್-ಶಿಫಾದಲ್ಲಿ ಇಸ್ರೇಲಿ ಪಡೆಗಳು ಒತ್ತೆಯಾಳುಗಳು ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗಾಗಿ ಶೋಧವನ್ನು ಮುಂದುವರಿಸಿದ್ದು, ಈ ಪ್ರದೇಶದ ಇತರ ಆಸ್ಪತ್ರೆಗಳಿಗೂ ಶೋಧ ಕಾರ್ಯಾಚರಣೆಯನ್ನು ವಿಸ್ತರಿಸಿವೆ. ಗುರುವಾರ ಶೋಧದ ಸಮಯದಲ್ಲಿ, ಆಸ್ಪತ್ರೆಯ ಕೆಳಗೆ ಭೂಗತ ಸುರಂಗ ಶಾಫ್ಟ್ ಪತ್ತೆಯಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ವಕ್ತಾರ ಡೇನಿಯಲ್ ಹಗರಿ ಗುರುವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವೈದ್ಯಕೀಯ ಕೇಂದ್ರದ ಕೆಳಗೆ ಅನೇಕ ಮದ್ದುಗುಂಡುಗಳನ್ನು ಹೊಂದಿರುವ ವಾಹನವೂ ಪತ್ತೆಯಾಗಿದೆ. ರಾನ್ಟಿಸಿ ಆಸ್ಪತ್ರೆಯ ಕೆಳಗೆ ಸುರಂಗಗಳ ಸಂಕೀರ್ಣ ಜಾಲ ಕಂಡುಬಂದಿದೆ. ಅಲ್-ಖುದ್ಸ್ ಆಸ್ಪತ್ರೆಯಲ್ಲಿ ಸಹ ಅನೇಕ ಶಸ್ತ್ರಾಸ್ತ್ರಗಳು ಕಂಡುಬಂದಿವೆ. ಇದು ಯುದ್ಧರಂಗವಾಗಿದ್ದು ಇಲ್ಲಿ ನಮ್ಮ ಪಡೆಗಳು ಇನ್ನೂ ಉಗ್ರಗಾಮಿಗಳೊಂದಿಗೆ ಹೋರಾಡುತ್ತಿವೆ ಎಂದು ಹಗರಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಹ್ಯಾಂಡ್ ಗ್ರೆನೇಡ್ಗಳು ಮತ್ತು ರಾಕೆಟ್ ಚಾಲಿತ ಗ್ರೆನೇಡ್ಗಳನ್ನು (ಆರ್ಪಿಜಿ) ತೋರಿಸುವ ಫೋಟೋಗಳನ್ನು ಪ್ರಸ್ತುತಪಡಿಸಿದರು.
ಅಕ್ಟೋಬರ್ 7 ರಂದು ಹಮಾಸ್ ಉಗ್ರಗಾಮಿಗಳಿಂದ ಅಪಹರಿಸಲ್ಪಟ್ಟ ಇಸ್ರೇಲಿ ಮಹಿಳೆ ಯೆಹುದಿತ್ ವೈಸ್ ಅವರ ಅವಶೇಷಗಳನ್ನು ಐಡಿಎಫ್ ಪಡೆಗಳು ಅಲ್-ಶಿಫಾ ಆಸ್ಪತ್ರೆಯ ಪಕ್ಕದ ಕಟ್ಟಡದಿಂದ ಹೊರತೆಗೆದಿವೆ ಎಂದು ಸೇನೆ ಈ ಹಿಂದೆ ಘೋಷಿಸಿತ್ತು. ಶವವನ್ನು ಇಸ್ರೇಲಿ ಭೂಪ್ರದೇಶಕ್ಕೆ ವರ್ಗಾಯಿಸಲಾಗಿದೆ. ಅಲ್-ಶಿಫಾ ಆಸ್ಪತ್ರೆಯ ಮೇಲೆ ಇಸ್ರೇಲ್ ಪಡೆಗಳು ದಾಳಿ ನಡೆಸುತ್ತಿರುವುದು ಇದು ಎರಡನೇ ಬಾರಿ.
ಆಸ್ಪತ್ರೆಯನ್ನು ಸುತ್ತುವರಿದ ಸ್ನೈಪರ್ಗಳು ವೈದ್ಯಕೀಯ ಸಿಬ್ಬಂದಿಯನ್ನು ಕಟ್ಟಡಗಳ ನಡುವೆ ಚಲಿಸದಂತೆ ತಡೆದಿದ್ದಾರೆ ಎಂದು ಅಲ್-ಶಿಫಾದ ನಿರ್ದೇಶಕ ಮುಹಮ್ಮದ್ ಅಬು ಸಲಾಮಿಯಾ ಅಲ್ ಜಜೀರಾ ಟಿವಿಗೆ ತಿಳಿಸಿದ್ದಾರೆ. 650 ಕ್ಕೂ ಹೆಚ್ಚು ಒಳರೋಗಿಗಳು, 500 ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರುವ ಆಸ್ಪತ್ರೆಯಲ್ಲಿ 5,000 ಸ್ಥಳಾಂತರಗೊಂಡ ಜನ ಆಶ್ರಯ ಪಡೆದಿದ್ದಾರೆ. ವೈದ್ಯಕೀಯ ಸೇವೆಗಳಿಗೆ ಹಾನಿಯಾದ ಕಾರಣ ತುರ್ತಾಗಿ ಡಯಾಲಿಸಿಸ್ ಅಗತ್ಯವಿರುವ ಕನಿಷ್ಠ ನಾಲ್ಕು ರೋಗಿಗಳು ಗಂಭೀರ ಸ್ಥಿತಿಯಲ್ಲಿ ಪರದಾಡುತ್ತಿದ್ದರು. ಇಸ್ರೇಲ್ ವಿದ್ಯುತ್, ನೀರು, ಆಹಾರ ಮತ್ತು ಇಂಧನ ಪೂರೈಕೆಗಳನ್ನು ಕಡಿತಗೊಳಿಸಿರುವುದು ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಿದೆ.