ಕಿಬ್ಬುಟ್ಜ್ ರೀಮ್ (ಇಸ್ರೇಲ್):ಅಕ್ಟೋಬರ್ 7 ರಂದು ಹಮಾಸ್ ಉಗ್ರರ ದಾಳಿಯಿಂದ ಎರಡು ಬಾರಿ ಪಾರಾದ ಇಸ್ರೇಲ್ ನಾಗರಿಕರೊಬ್ಬರ ಅನುಭವ ಇಲ್ಲಿದೆ. ಇಸ್ರೇಲ್ನಲ್ಲಿ ವಾಸಿಸುವ ಸಿಲ್ಬರ್ಬರ್ಗ್ ಎಂಬವರು ಮೊದಲಿಗೆ ಟ್ರೈಬ್ ಆಫ್ ನೋವಾ ಸಂಗೀತ ಉತ್ಸವದ ಮೇಲೆ ನಡೆದ ಹಮಾಸ್ ದಾಳಿಯಲ್ಲಿ ಪಾರಾಗಿದ್ದರು. ಅದಾಗಿ ಕೆಲವೇ ಹೊತ್ತಿನಲ್ಲಿ ಅವರು ಮತ್ತೊಂದು ದಾಳಿಯನ್ನು ಎದುರಿಸಬೇಕಾಯಿತು.
ಅಕ್ಟೋಬರ್ 7ರಂದು ಪ್ಯಾಲೆಸ್ಟೈನ್ ನ ಹಮಾಸ್ ಉಗ್ರರು ಟ್ರೈಬ್ ಆಫ್ ನೋವಾ ಸಂಗೀತ ಉತ್ಸವದ ಸ್ಥಳಕ್ಕೆ ಗುಂಪುಗುಂಪಾಗಿ ಬಂದು ಕನಿಷ್ಠ 260 ಜನರನ್ನು ಕೊಂದು, ಅದೆಷ್ಟೋ ಜನರನ್ನು ಒತ್ತೆಯಾಳುಗಳನ್ನಾಗಿ ತೆಗೆದುಕೊಂಡು ಹೋಗಿದ್ದರು.
ಸಂಗೀತ ಉತ್ಸವದ ಜಾಗದಿಂದ ಪಾರಾಗಿ ಕಾರಿನಲ್ಲಿ ಹೋಗುತ್ತಿದ್ದ ಸಿಲ್ಬರ್ಬರ್ಗ್ ಅವರಿಗೆ ತಮಗಿಂತ ಮುಂದೆ ಇಬ್ಬರು ಉಗ್ರರು ಮೋಟರ್ಸೈಕಲ್ನಲ್ಲಿ ಹೋಗುವುದು ಕಾಣಿಸಿತ್ತು. ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದ ಅವರು ಕಂಡ ಕಾರುಗಳ ಮೇಲೆ ಗುಂಡಿನ ಸುರಿಮಳೆಗೈಯುತ್ತಿದ್ದರು. ಒಬ್ಬ ಉಗ್ರ ವಾಹನ ಚಲಾಯಿಸುತ್ತಿದ್ದರೆ, ಮತ್ತೊಬ್ಬ ಹಿಂದೆ ಕುಳಿತು ಕಂಡ ಎಲ್ಲ ಕಾರುಗಳ ಮೇಲೆ ಗುಂಡು ಹಾರಿಸುತ್ತಿದ್ದ ಎಂದು 50 ವರ್ಷದ ಸಿಲ್ಬರ್ಬರ್ಗ್ ಹೇಳಿದರು. ಇಬ್ಬರು ಉಗ್ರರಲ್ಲಿ ಓರ್ವ ಬುಲೆಟ್ ಪ್ರೂಫ್ ಕವಚ ಧರಿಸಿದ್ದ. ಇಂಥ ಸಮಯದಲ್ಲಿ ಸಿಲ್ಬರ್ಬರ್ಗ್ ಮನಸಿನಲ್ಲಿ ಒಂದು ನಿರ್ಧಾರ ಮಾಡಿದರು. ಉಗ್ರರನ್ನು ನೋಡಿದ ತಕ್ಷಣವೇ ಒಂದೋ ಅವರನ್ನು ಸಾಯಿಸಬೇಕು ಅಥವಾ ನಾವು ಸಾಯಬೇಕು ಎಂಬುದು ಸಿಲ್ಬರ್ಬರ್ಗ್ ಅವರಿಗೆ ಖಚಿತವಾಗಿತ್ತು.