ಗಾಜಾ/ಟೆಲ್ ಅವೀವ್: ಹಮಾಸ್ ಉಗ್ರಗಾಮಿಗಳನ್ನು ಕೊಲ್ಲುವ ಉದ್ದೇಶದಿಂದ ಗಾಜಾ ಮೇಲೆ ಇಸ್ರೇಲ್ ನಿರಂತರ ದಾಳಿ ನಡೆಸುತ್ತಿದೆ. ಒಂದೆಡೆ ಜಗತ್ತಿನ ದೇಶಗಳು ಬೇಡ ಎನ್ನುತ್ತಿದ್ದರೂ ಸಹ ಇಸ್ರೇಲ್ ಸೇನೆ ಹಿಂದೆ ಸರಿಯುತ್ತಿಲ್ಲ. ಗಾಜಾ ಪಟ್ಟಿಯಲ್ಲಿರುವ ನಿರಾಶ್ರಿತರ ಶಿಬಿರದ ಮೇಲೂ ನಡೆದ ಇತ್ತೀಚಿನ ದಾಳಿಯಲ್ಲಿ 52 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ ಮನವಿಗೆ ಕ್ಯಾರೆನ್ನದ ಇಸ್ರೇಲ್: ಗಾಜಾದ ನಾಗರಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ಯುದ್ಧ ವಿರಾಮ ಘೋಷಿಸಬೇಕೆಂದು ವಿನಂತಿಸಿದ ಅಮೆರಿಕ ನಿರ್ಧಾರವನ್ನು ಇಸ್ರೇಲ್ ನಿರಾಕರಿಸಿದೆ. ಇದಾದ ಕೆಲವೇ ಹೊತ್ತಿನಲ್ಲಿ ವೈಮಾನಿಕ ದಾಳಿ ನಡೆದಿದೆ. ಯುದ್ಧದಲ್ಲಿ ಇದುವರೆಗೆ 9,480 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ. ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎನ್ನಲಾಗುತ್ತಿದೆ.
ಸಾವಿರಾರು ಜನರು ಆಶ್ರಯ ಪಡೆದಿರುವ ವಿಶ್ವಸಂಸ್ಥೆಯ ಶಾಲೆಯೊಂದರ ಮೇಲೆ ಶನಿವಾರ ನಡೆದ ದಾಳಿಯಲ್ಲಿ 12 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಸಂಘಟನೆ ಹೇಳಿದೆ. ಗಾಜಾವನ್ನು ಹಮಾಸ್ ಭಯೋತ್ಪಾದಕ ಸಂಘಟನೆಯ ಕೇಂದ್ರ ಎಂದು ಕರೆದಿರುವ ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ತಮ್ಮ ಪಡೆಗಳು ಗಾಜಾವನ್ನು ಸುತ್ತುವರೆದಿವೆ ಎಂದು ತಿಳಿಸಿದ್ದಾರೆ.
ಬ್ಲಿಂಕೆನ್ ರಾಜತಾಂತ್ರಿಕ ಪ್ರಯತ್ನ:ಇಸ್ರೇಲ್ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರ ಕದನ ವಿರಾಮದ ಪ್ರಸ್ತಾವನೆಯನ್ನು ನೆತನ್ಯಾಹು ತಿರಸ್ಕರಿಸಿದ್ದಾರೆ. ಬ್ಲಿಂಕನ್ ಪಶ್ಚಿಮ ಏಷ್ಯಾದಲ್ಲಿ ಅರಬ್ ನಾಯಕರನ್ನು ಭೇಟಿಯಾಗಿ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಜೋರ್ಡಾನ್‌ನಲ್ಲಿ ಅರಬ್ ವಿದೇಶಾಂಗ ಮಂತ್ರಿಗಳನ್ನು ಅವರು ಭೇಟಿಯಾಗಿದ್ದಾರೆ. ಅರಬ್ ನಾಯಕರು ಗಾಜಾದಲ್ಲಿ ನಡೆಯುತ್ತಿರುವ ದಾಳಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉತ್ತರ ಗಾಜಾದಲ್ಲಿ ಇನ್ನೂ ಮೂರೂವರೆಯಿಂದ 4 ಲಕ್ಷ ನಾಗರಿಕರಿದ್ದಾರೆ. ಅವರಿಗೇನಾದರೂ ಸಂಭವಿಸಿದರೆ ಇಸ್ರೇಲ್ ಹೊಣೆ ಎಂದು ಅರಬ್ ರಾಷ್ಟ್ರಗಳು ಎಚ್ಚರಿಸಿವೆ.
ಗಾಜಾದಲ್ಲಿ ನಾಗರಿಕರ ಸಾವುಗಳನ್ನು ತಡೆಯಲು ಅಮೆರಿಕ ಮಾನವೀಯ ಕ್ರಮಗಳನ್ನು ಬೆಂಬಲಿಸುತ್ತದೆ. ಪ್ರಸ್ತುತ ನಮ್ಮ ಎಲ್ಲಾ ಪ್ರಯತ್ನಗಳು ಗಾಜಾದಲ್ಲಿ ಶಾಂತಿ ತರುತ್ತವೆ ಎಂಬ ವಿಶ್ವಾಸವಿದೆ ಎಂದು ಬ್ಲಿಂಕನ್ ಹೇಳಿದರು. ಹಮಾಸ್ ದಾಳಿಯಲ್ಲಿ ಗಾಯಗೊಂಡ ಇಸ್ರೇಲಿ ಸೈನಿಕರು ರಫಾ ಗಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಗಾಜಾದಿಂದ ವಿದೇಶಿಯರ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹಮಾಸ್ ಪ್ರಕಟಣೆ ಮೂಲಕ ತಿಳಿಸಿದೆ.
ಇಸ್ರೇಲ್-ಗಾಜಾ ಯುದ್ಧದ ವಿರುದ್ಧ ಪ್ರತಿಭಟನೆ: ಗಾಜಾದಲ್ಲಿ ನಡೆದ ದಾಳಿಯ ನಂತರ ಅನೇಕ ದೇಶಗಳು ಆತಂಕ ವ್ಯಕ್ತಪಡಿಸಿವೆ. ಟರ್ಕಿ ತನ್ನ ರಾಯಭಾರಿಯನ್ನು ಇಸ್ರೇಲ್‌ನಿಂದ ವಾಪಸ್ ಕರೆಸಿಕೊಂಡಿದೆ. ಗಾಜಾದಲ್ಲಿ ಮಹಿಳೆಯರು ಮತ್ತು ಮಕ್ಕಳ ಸಾವಿಗೆ ನೆತನ್ಯಾಹು ವೈಯಕ್ತಿಕವಾಗಿ ಜವಾಬ್ದಾರರಾಗಿರಬೇಕು ಎಂದು ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ. ಮತ್ತೊಂದೆಡೆ, ಗಾಜಾದಲ್ಲಿ ಹೆಚ್ಚುತ್ತಿರುವ ಸಾವಿನ ಸಂಖ್ಯೆಯಿಂದ ಅಂತರರಾಷ್ಟ್ರೀಯ ಸಮುದಾಯ ಆಕ್ರೋಶಗೊಂಡಿದೆ. ತಕ್ಷಣವೇ ಕದನ ವಿರಾಮಕ್ಕೆ ಆಗ್ರಹಿಸಿ ಸಾವಿರಾರು ಜನರು ವಾಷಿಂಗ್ಟನ್‌ನಿಂದ ಬರ್ಲಿನ್‌ವರೆಗೆ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ:ಗಾಜಾ ಪಟ್ಟಿಯನ್ನು ಎರಡು ಭಾಗಗಳಾಗಿ ವಿಂಗಡಿಸಿ ದಾಳಿ ಮುಂದುವರೆಸಿದ ಇಸ್ರೇಲ್ ಸೇನೆ