ಟೆಲ್ ಅವೀವ್:ಹಮಾಸ್ ಮತ್ತು ಇಸ್ರೇಲ್ ಮಧ್ಯೆ ನಡೆಯುತ್ತಿರುವ ಯುದ್ಧದಲ್ಲಿ ಹಲವು ರೋಚಕ ಸುದ್ದಿಗಳು ಈಗ ಹೊರಬೀಳುತ್ತಿವೆ. ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಯಹೂದಿ ರಾಷ್ಟ್ರದ ಗಡಿ ಛೇದಿಸಿ ಒಳಬಂದು ಯಾದ್ ಮೊರ್ದೆಚೈ ವಸಾಹತು ಪ್ರದೇಶದಲ್ಲಿನ ಜನರ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ಮಾಡಿ 1400 ಮಂದಿ ಬಲಿ ತೆಗೆದುಕೊಂಡಿದ್ದರು.
ಸಿಕ್ಕಸಿಕ್ಕವರ ಮೇಲೆ ಗುಂಡಿನ ಮಳೆಗರೆಯುತ್ತಾ ಸಾಗಿದ ಉಗ್ರರು ಯಾದ್ ಮೊರ್ದೆಚೈ ನಗರದ ಬಳಿಕ ಇಸ್ರೇಲ್ನ ಪ್ರಮುಖ ನಗರವಾದ ಟೆಲ್ ಅವೀವ್ ಮೇಲೂ ದಾಳಿ ಮಾಡುವ ಯೋಜನೆ ಹೊಂದಿದ್ದರು. ಆದರೆ, ಇಸ್ರೇಲ್ ಪೊಲೀಸರ ಪ್ರಯತ್ನದಿಂದಾಗಿ ಈ ತಂತ್ರ ವಿಫಲವಾಗಿತ್ತು ಎಂದು ಇದೀಗ ತಿಳಿದು ಬಂದಿದೆ. ಇದನ್ನು ಸೆರೆಸಿಕ್ಕ ಹಮಾಸ್ ಉಗ್ರರೇ ಬಾಯ್ಬಿಟ್ಟಿದ್ದಾರೆ.
ಪೊಲೀಸರಿಂದ ದಾಳಿ ಯೋಜನೆ ವಿಫಲ:ಯಾದ್ ಮೊರ್ದೆಚೈ ವಸಾಹತು ಪ್ರದೇಶದ ಮೇಲೆ ದಾಳಿ ಮಾಡಿದ ಬಳಿಕ ಟೆಲ್ ಅವೀವ್ ನಗರ ಪ್ರವೇಶಿಸಿ ದಾಳಿ ಮಾಡುವ ಯೋಜನೆ ಇತ್ತು. ಆದರೆ, ಇದನ್ನು ಪೊಲೀಸರು ತಡೆಯುವ ಮೂಲಕ ನಮ್ಮ ಯೋಜನೆಯನ್ನು ವಿಫಲಗೊಳಿಸಿದರು ಎಂದು ತಿಳಿಸಿದ್ದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಮತ್ತು ಇಸ್ರೇಲ್ ಭದ್ರತಾ ಸಂಸ್ಥೆ (ಐಎಸ್‌ಎ) ಜಂಟಿ ಹೇಳಿಕೆ ನೀಡಿವೆ.
ಬಂಧಿತ ಹಮಾಸ್ ಉಗ್ರರನ್ನು ವಿಚಾರಣೆ ನಡೆಸಿದ ವೇಳೆ ಅವರೇ ಈ ಮಾಹಿತಿಯನ್ನು ನೀಡಿದ್ದಾರೆ. ಅಕ್ಟೋಬರ್ 7 ರಂದು ಹಮಾಸ್ ಉಗ್ರಗಾಮಿಗಳು ನೋವಾದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಮೇಲೆ ದಾಳಿ ಮಾಡಿದಾಗ ಕೊಲ್ಲಲ್ಪಟ್ಟ ಜನರ ಸಂಖ್ಯೆ 270 ಎಂದು ನಂಬಲಾಗಿತ್ತು. ಆದರೆ, ಅದನ್ನು ಉಗ್ರರೇ ನಿರಾಕರಿಸಿದ್ದು, 364 ಕ್ಕಿಂತಲೂ ಅಧಿಕ ಜನರನ್ನು ಬಲಿ ಪಡೆದಿದ್ದಾಗಿ ತಿಳಿಸಿದ್ದಾರೆ ಎಂದು ಐಡಿಎಫ್ ಹೇಳಿದೆ.
ಮೊದಲು ಸಂಗೀತ ಕಾರ್ಯಕ್ರಮದ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ. ಇಸ್ರೇಲ್ ಮೇಲಿನ ದಾಳಿಯ ಸಮಯದಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ತಿಳಿದ ಮೇಲೆ ಆಕ್ರಮಣ ಮಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಜನರು ಒಂದೆಡೆ ನೆರೆದಿದ್ದ ಕಾರಣ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು ಎಂದು ಉಗ್ರರು ಬಾಯಿ ಬಿಟ್ಟಿದ್ದಾರೆ.
ಪೊಲೀಸ್ ಅಧಿಕಾರಿಗಳೂ ಬಂಧಿ:ಸಂಗೀತ ಕಾರ್ಯಕ್ರಮದ ಮೇಲೆ ದಾಳಿ ಮಾಡಿ 364 ಜನರನ್ನು ಹತ್ಯೆ ಮಾಡಿದ ಬಳಿಕ ಅಲ್ಲಿ ಸಿಕ್ಕ 17 ಪೊಲೀಸ್ ಅಧಿಕಾರಿಗಳು ಮತ್ತು 40 ಜನರನ್ನು ಹಮಾಸ್ ಅಪಹರಿಸಿ ಗಾಜಾಕ್ಕೆ ಕರೆದೊಯ್ದಿದೆ. ಅಂದಿನ ದಾಳಿಯಲ್ಲಿ ಅತಿ ಹೆಚ್ಚು ಜನರು ಸಾವಿಗೀಡಾಗಿದ್ದು, ಇದೇ ಕಾರ್ಯಕ್ರಮದಲ್ಲಿ. ಸಂಗೀತೋತ್ಸವದ ಮೇಲೆ ನಡೆದ ದಾಳಿಯಲ್ಲಿ ಸಾವಿಗೀಡಾದ ಜನರ ಸಂಖ್ಯೆಯು ನಿಖರವಾಗಿಲ್ಲ. ಇದು 1200 ಕ್ಕಿಂತ ಅಧಿಕ ಎಂದು ಇಸ್ರೇಲ್ ಅಧಿಕಾರಿಗಳು ಶಂಕಿಸಿದ್ದಾರೆ.
ಇದನ್ನೂ ಓದಿ:'ದಕ್ಷಿಣ ಗಾಜಾದಿಂದ ಪಲಾಯನ ಮಾಡಿ': ಪ್ಯಾಲೆಸ್ಟೈನಿಯರಿಗೆ ಎಚ್ಚರಿಕೆ ನೀಡಿದ ಇಸ್ರೇಲ್