ಕರ್ನಾಟಕ

karnataka

ETV Bharat / international

Israel Palestine Conflict: ವೆಸ್ಟ್​ ಬ್ಯಾಂಕ್​ ಮೇಲೆ ಇಸ್ರೇಲ್ ದಾಳಿ; ಹಾನಿ ಪರಿಶೀಲಿಸಿದ ರಾಜತಾಂತ್ರಿಕರ ನಿಯೋಗ

ವೆಸ್ಟ್​ ಬ್ಯಾಂಕ್​ ಪ್ರದೇಶದಲ್ಲಿ ಇಸ್ರೇಲ್ ದಾಳಿಯಿಂದಾದ ಹಾನಿಯನ್ನು ಪರಿಶೀಲಿಸಲು ರಾಜತಾಂತ್ರಿಕರ ನಿಯೋಗ ವೆಸ್ಟ್​ ಬ್ಯಾಂಕ್​ಗೆ ಭೇಟಿ ನೀಡಿತ್ತು.

Foreign diplomats visit West Bank after Israel's large-scale military raid
Foreign diplomats visit West Bank after Israel's large-scale military raid

By

Published : Jul 9, 2023, 3:09 PM IST

ಜೆನಿನ್ (ವೆಸ್ಟ್ ಬ್ಯಾಂಕ್) : ಈ ವಾರದ ಆರಂಭದಲ್ಲಿ ವೆಸ್ಟ್​ ಬ್ಯಾಂಕ್ ನಗರವಾದ ಜೆನಿನ್ ಮತ್ತು ಅಲ್ಲಿನ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್ ದೊಡ್ಡ ಪ್ರಮಾಣದ ಮಿಲಿಟರಿ ದಾಳಿ ನಡೆಸಿದ ನಂತರ ವಿದೇಶಿ ರಾಜತಾಂತ್ರಿಕರ ನಿಯೋಗ ಅಲ್ಲಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲನೆ ನಡೆಸಿದೆ. ಪ್ಯಾಲೆಸ್ಟೈನ್ ನಿರಾಶ್ರಿತರ ಯುನೈಟೆಡ್ ನೇಷನ್ಸ್ ರಿಲೀಫ್ ಮತ್ತು ವರ್ಕ್ಸ್ ಏಜೆನ್ಸಿ (The United Nations Relief and Works Agency for Palestine Refugees) ಶನಿವಾರ ಪ್ರವಾಸ ಆಯೋಜಿಸಿತ್ತು. 30 ರಾಜತಾಂತ್ರಿಕರನ್ನೊಳಗೊಂಡ ನಿಯೋಗವು ಹಲವಾರು ಗಂಟೆಗಳ ಕಾಲ ಯುದ್ಧ ಸಂತ್ರಸ್ತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿತು. ನಿಯೋಗವು ಬಹುತೇಕ ಯುರೋಪಿಯನ್ ರಾಷ್ಟ್ರಗಳ ರಾಜತಾಂತ್ರಿಕರನ್ನು ಒಳಗೊಂಡಿತ್ತು.

ಜುಲೈ 3 ರಂದು ಇಸ್ರೇಲ್ ಸೇನೆಯು ಪ್ಯಾಲೆಸ್ಟೈನ್ ಉಗ್ರಗಾಮಿಗಳನ್ನು ಹತ್ತಿಕ್ಕಲು ಜೆನಿನ್ ಪ್ರದೇಶದಲ್ಲಿ ಎರಡು ದಿನಗಳ ಕಾಲ ದೊಡ್ಡ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ದಾಳಿಯಲ್ಲಿ 12 ಪ್ಯಾಲೆಸ್ಟೈನಿಯನ್ನರು ಮತ್ತು ಒಬ್ಬ ಇಸ್ರೇಲಿ ಸೇನಾಧಿಕಾರಿ ಸಾವನ್ನಪ್ಪಿ, ಡಜನ್​ಗಟ್ಟಲೆ ಜನ ಗಾಯಗೊಂಡರು.

ರಾಜತಾಂತ್ರಿಕರು ನಿರಾಶ್ರಿತರ ಶಿಬಿರವನ್ನು, ಇಸ್ರೇಲಿ ದಾಳಿಯ ಸಮಯದಲ್ಲಿ ನಾಶವಾದ ಮನೆಗಳು ಮತ್ತು ಮೂಲಸೌಕರ್ಯಗಳನ್ನು ವೀಕ್ಷಿಸಿದರು. ಸಂಭವಿಸಿದ ಹಾನಿಯನ್ನು ನೋಡಲು ಮತ್ತು ಅಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ನೀಡಲು ನಿಯೋಗ ಜೆನಿನ್‌ಗೆ ಭೇಟಿ ನೀಡಿದೆ ಎಂದು ಪ್ಯಾಲೆಸ್ಟೈನ್‌ನಲ್ಲಿರುವ ಯುರೋಪಿಯನ್ ಒಕ್ಕೂಟದ ಪ್ರತಿನಿಧಿ ಸ್ವೆನ್ ಕುನ್ ವಾನ್ ಬರ್ಗ್ಸ್‌ಡಾರ್ಫ್ ವರದಿಗಾರರಿಗೆ ತಿಳಿಸಿದರು.

ಈ ಭೇಟಿಯು ಶಿಬಿರದಲ್ಲಿನ ಜನರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ಮಕ್ಕಳು ಮತ್ತು ಕುಟುಂಬಗಳನ್ನು ರಕ್ಷಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಜೆನಿನ್ ಮತ್ತು ಅಲ್ಲಿನ ಶಿಬಿರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಪ್ಯಾಲೇಸ್ಟೈನಿಯನ್ ಪ್ರಾಧಿಕಾರಕ್ಕೆ ಆರ್ಥಿಕ ಮತ್ತು ರಾಜಕೀಯ ಬೆಂಬಲವನ್ನು ಒದಗಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಇಸ್ರೇಲ್‌ನ ಬದ್ಧತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬರ್ಗ್ಸ್‌ಡಾರ್ಫ್ ಅಂತಾರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು. ಜನವರಿಯಿಂದ ಪ್ಯಾಲೇಸ್ಟೈನಿಯರು ನಡೆಸಿದ ಸರಣಿ ದಾಳಿಗಳಲ್ಲಿ 26 ಜನ ಕೊಲ್ಲಲ್ಪಟ್ಟಿದ್ದಾರೆ. ಇದರಲ್ಲಿ ಬಹುತೇಕರು ಇಸ್ರೇಲಿಗಳು. ಇನ್ನು ಇಸ್ರೇಲ್ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ 190 ಪ್ಯಾಲೆಸ್ಟೈನಿಯರು ಸಾವಿಗೀಡಾಗಿದ್ದಾರೆ. ಮೃತರಲ್ಲಿ ಹಲವಾರು ಮಕ್ಕಳು, ಮಹಿಳೆಯರು ಸೇರಿದ್ದಾರೆ.

ವೆಸ್ಟ್ ಬ್ಯಾಂಕ್ ಎಂಬುದು ಇಸ್ರೇಲ್‌ನ ಪೂರ್ವದ ಒಂದು ಭಾಗವಾಗಿದೆ. ಇದು ಸುಮಾರು ಮೂರು ಮಿಲಿಯನ್ ಪ್ಯಾಲೇಸ್ಟಿನಿಯನ್ನರಿಗೆ ನೆಲೆಯಾಗಿದೆ. 1967 ರಲ್ಲಿ ಇಸ್ರೇಲ್ ಅದರ ಮೇಲೆ ಹಿಡಿತ ಸಾಧಿಸಿತು ಮತ್ತು ಯಹೂದಿ ವಸಾಹತುಗಾರರಿಗೆ ಸ್ಥಳಾಂತರಗೊಳ್ಳಲು ಅವಕಾಶ ಮಾಡಿಕೊಟ್ಟಿತು. ಆದರೆ ಇದು ತಮ್ಮ ಭೂಮಿ ಎಂದು ಪ್ರತಿಪಾದಿಸುವ ಪ್ಯಾಲೆಸ್ಟೈನಿಯರು, ಇಸ್ರೇಲ್ ಇದನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಆರೋಪಿಸುತ್ತಾರೆ.

ಇದನ್ನೂ ಓದಿ : ಅಗ್ನಿಸಾಕ್ಷಿಯಲ್ಲ, ChatGPT ಸಾಕ್ಷಿಯಾಗಿ ನಡೆಯಿತು ಮದುವೆ; ಇದು ಚಾಟ್​ಬಾಟ್​ ಪೌರೋಹಿತ್ಯದ ವಿವಾಹ!

ABOUT THE AUTHOR

...view details