ನವದೆಹಲಿ: ಕೈದಿಗಳು ಹಾಗೂ ಒತ್ತೆಯಾಳುಗಳ ವಿನಿಮಯಕ್ಕಾಗಿ ಇಸ್ರೇಲ್ ಹೊಸ ಒಪ್ಪಂದವೊಂದನ್ನು ಕತಾರ್ ಮುಂದಿಟ್ಟಿದೆ ಎಂದು ಮಾಧ್ಯಮ ವರದಿಗಳು ಗುರುವಾರ ತಿಳಿಸಿವೆ. ಹೊಸ ಪ್ರಸ್ತಾವನೆಯನ್ನು ಅಮೆರಿಕದ ಮೂಲಕ ಕತಾರ್ಗೆ ತಲುಪಿಸಲಾಗಿದೆ ಎಂದು ಇಸ್ರೇಲ್ನ ಮಾಧ್ಯಮ ವರದಿಗಳು ತಿಳಿಸಿವೆ. ಪ್ರಸ್ತಾಪಿತ ಹೊಸ ಒಪ್ಪಂದದಲ್ಲಿ ಇಸ್ರೇಲ್ ಗಾಜಾದ ಜನನಿಬಿಡ ಪ್ರದೇಶಗಳಿಂದ ಮೊದಲಿಗೆ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವುದು ಮತ್ತು ಗಾಜಾಗೆ ಹೆಚ್ಚುವರಿ ನೆರವು ಸಾಮಗ್ರಿ ಹರಿದು ಬರಲು ಬಿಡುವ ಅಂಶಗಳು ಸೇರಿವೆ.
"ಎರಡನೇ ಹಂತದಲ್ಲಿ ಹಮಾಸ್ ಒತ್ತೆಯಾಳಾಗಿಟ್ಟುಕೊಂಡಿರುವ ಇಸ್ರೇಲ್ನ ಮಹಿಳಾ ಸೈನಿಕರು, ಮಹಿಳಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಮತ್ತು ಮೃತ ಇಸ್ರೇಲಿಗಳ ಶವಗಳನ್ನು ಹಸ್ತಾಂತರಿಸಬೇಕು" ಎಂದು ಇಸ್ರೇಲ್ ಷರತ್ತುಗಳನ್ನು ಮುಂದಿಟ್ಟಿದೆ.
ಆದರೆ ಸಂಪೂರ್ಣ ಕದನ ವಿರಾಮವಾಗದೆ ಯಾವುದೇ ಒತ್ತೆಯಾಳುಗಳ ಬಿಡುಗಡೆಗೆ ಒಪ್ಪುವುದಿಲ್ಲ ಎಂದು ಹಮಾಸ್ ಪದೇ ಪದೆ ಹೇಳಿರುವುದು ಗಮನಾರ್ಹ. ನವೆಂಬರ್ 24 ರಿಂದ ಡಿಸೆಂಬರ್ 1 ರವರೆಗೆ ಹಮಾಸ್ ಮತ್ತು ಇಸ್ರೇಲ್ ನಡುವಿನ ತಾತ್ಕಾಲಿಕ ಒಂದು ವಾರದ ಕದನ ವಿರಾಮದ ಸಮಯದಲ್ಲಿ, ಹಮಾಸ್ 105 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. 129 ಒತ್ತೆಯಾಳುಗಳು ಇನ್ನೂ ಹಮಾಸ್ ವಶದಲ್ಲಿದ್ದಾರೆ. ಉಳಿದ 129 ಒತ್ತೆಯಾಳುಗಳಲ್ಲಿ ಕನಿಷ್ಠ 20 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸರ್ಕಾರ ಶಂಕಿಸಿದೆ.