ಜೆರುಸಲೇಂ (ಇಸ್ರೇಲ್): ಇಸ್ರೇಲ್ ಮೇಲೆ ಪ್ಯಾಲೆಸ್ಟೀನ್ನ ಇಸ್ಲಾಮಿಕ್ ಹಮಾಸ್ ಉಗ್ರಗಾಮಿ ಪಡೆಯು ಶನಿವಾರ ಹಠಾತ್ ದಾಳಿ ನಡೆಸಿದೆ. ಈ ಕುರಿತು ಮೊದಲ ಬಾರಿಗೆ ಮೊದಲ ಸಾರ್ವಜನಿಕ ಹೇಳಿಕೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಷ್ಟ್ರವು 'ಯುದ್ಧ'ದಲ್ಲಿದೆ ಎಂದು ಘೋಷಿಸಿದ್ದಾರೆ. ಅಲ್ಲದೇ, ಶತ್ರುಗಳು ಹಿಂದೆಂದೂ ಕಂಡಿರದ ಬೆಲೆ ತೆರಲಿದ್ದಾರೆ ಎಂದು ಅವರು ಗುಡುಗಿದ್ದಾರೆ.
ಹಮಾಸ್ ಉಗ್ರಗಾಮಿ ಪಡೆಯ ದಾಳಿ ಬೆನ್ನಲ್ಲೇ ತಮ್ಮ ದೇಶವಾಸಿಗಳನ್ನು ಉದ್ದೇಶಿಸಿ ದೂರದರ್ಶನದಲ್ಲಿ ಭಾಷಣ ಮಾಡಿದ ಪ್ರಧಾನಿ ನೆತನ್ಯಾಹು, ನಾವು ಯುದ್ಧದಲ್ಲಿ ತೊಡಗಿದ್ದೇವೆ. ದಾಳಿಕೋರರ ವಿರುದ್ಧ ಕಾರ್ಯಾಚರಣೆಯಲ್ಲಿಲ್ಲ. ನಾನು ಯುದ್ಧದಲ್ಲಿದ್ದೇವೆ. ಶನಿವಾರ ಬೆಳಗ್ಗೆ ಇಸ್ರೇಲ್ ಮತ್ತು ಅದರ ನಾಗರಿಕರ ಮೇಲೆ ಹಮಾಸ್ ಮಾರಣಾಂತಿಕ ಹಠಾತ್ ದಾಳಿಯನ್ನು ಪ್ರಾರಂಭಿಸಿದೆ. ಬೆಳಗ್ಗೆಯಿಂದಲೂ ಹಮಾಸ್ ವಿರುದ್ಧ ಹೋರಾಟದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ನಾನು ಭದ್ರತಾ ಸಂಸ್ಥೆಯ ಮುಖ್ಯಸ್ಥರ ಸಭೆ ಕರೆದು ಮೊದಲಿಗೆ ಭಯೋತ್ಪಾದಕರು ಒಳನುಸುಳುಕೋರರನ್ನು ಹೊರಹಾಕಲು ಆದೇಶಿಸಿದೆ. ಈ ಕಾರ್ಯವನ್ನು ಪ್ರಸ್ತುತ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಪಿಎಂ ತಿಳಿಸಿದರು. ಮುಂದುವರೆದು, ನಾನು ಮೀಸಲು ಪಡೆಗಳನ್ನು ವ್ಯಾಪಕವಾಗಿ ಸಜ್ಜುಗೊಳಿಸಲು ಆದೇಶಿಸಲಾಗಿದೆ. ಶತ್ರುಗಳು ಅರಿದ ಪ್ರಮಾಣದ ಪ್ರತಿದಾಳಿಯನ್ನು ನೀಡಲಿದ್ದೇವೆ. ಶತ್ರುಗಳು ಹಿಂದೆಂದೂ ಕಂಡಿರದ ಬೆಲೆ ತೆರಲಿದ್ದಾರೆ. ಇದರ ನಡುವೆ ಇಸ್ರೇಲ್ನ ರಕ್ಷಣಾ ಪಡೆ ಮತ್ತು ಹೋಮ್ ಫ್ರಂಟ್ ಕಮಾಂಡ್‌ನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಾನು ಇಸ್ರೇಲ್ ನಾಗರಿಕರಿಗೆ ಕರೆ ನೀಡುತ್ತೇನೆ. ನಾವು ಯುದ್ಧವನ್ನು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.