ದೇರ್ ಅಲ್-ಬಲಾಹ್ (ಗಾಜಾ ಪಟ್ಟಿ) : ಉತ್ತರ ಗಾಜಾದಲ್ಲಿ ಮಂಗಳವಾರ ಇಸ್ರೇಲಿ ಪದಾತಿ ಪಡೆಗಳು ಹಮಾಸ್ ಉಗ್ರರು ಮತ್ತು ಮೂಲಸೌಕರ್ಯಗಳ ಮೇಲೆ ದಾಳಿ ಮುಂದುವರೆಸಿವೆ. ಇಡೀ ಗಾಜಾ ಪ್ರದೇಶವನ್ನು ಇಸ್ರೇಲಿ ಪಡೆಗಳು ಸುತ್ತುವರೆದಿದ್ದು, ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ವೈಮಾನಿಕ ದಾಳಿ ನಡೆಸುತ್ತಿವೆ. ಮೂರು ವಾರಗಳ ಹಿಂದೆ ಯುದ್ಧ ಪ್ರಾರಂಭವಾದಾಗಿನಿಂದ ಸುಮಾರು 8 ಲಕ್ಷ ಜನ ಗಾಜಾ ತೊರೆದಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಹಮಾಸ್ ವಶದಲ್ಲಿದ್ದ ಸೆರೆಯಾಳನ್ನು ಮೊದಲ ಬಾರಿಗೆ ಯಶಸ್ವಿಯಾಗಿ ರಕ್ಷಿಸಿದ ನಂತರ ಉತ್ತೇಜಿತರಾಗಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕದನ ವಿರಾಮದ ಮನವಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಅಕ್ಟೋಬರ್ 7ರಂದು ರಕ್ತಸಿಕ್ತ ಹಿಂಸಾಚಾರ ನಡೆಸಿದ ಹಮಾಸ್ನ ಗಾಜಾ ಆಳುವ ಸಾಮರ್ಥ್ಯವನ್ನು ಮತ್ತು ಇಸ್ರೇಲ್ ಮೇಲೆ ಅದು ಮತ್ತೊಮ್ಮೆ ದಾಳಿ ನಡೆಸುವ ಶಕ್ತಿಯನ್ನು ನಿರ್ನಾಮ ಮಾಡುವುದಾಗಿ ಅವರು ಮತ್ತೊಮ್ಮೆ ಪ್ರತಿಜ್ಞೆ ಮಾಡಿದ್ದಾರೆ.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ಸಮಯದಲ್ಲಿ ಪ್ಯಾಲೆಸ್ಟೈನ್ ಉಗ್ರಗಾಮಿಗಳು ಸೆರೆಹಿಡಿದ ಅಂದಾಜು 240 ಸೆರೆಯಾಳುಗಳ ಪೈಕಿ ಒಬ್ಬರನ್ನು ವಿಶೇಷ ಪಡೆಗಳ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ ಎಂದು ಮಿಲಿಟರಿ ಹೇಳಿದೆ. ನೆಲದ ಮೇಲೆ ನಡೆಸುವ ಯುದ್ಧವು ಒತ್ತೆಯಾಳುಗಳಿಗೆ ಅಪಾಯ ಮಾಡುವುದಿಲ್ಲ, ಬದಲಾಗಿ ಅವರನ್ನು ಬಿಡಿಸಿಕೊಳ್ಳಲು ಸಹಾಯಕವಾಗಲಿದೆ ಎಂದ ನೆತನ್ಯಾಹು ಅವರ ಹೇಳಿಕೆಗೆ ಇದರಿಂದ ಬಲ ಬಂದಂತಾಗಿದೆ.
ಹಮಾಸ್ ಉಗ್ರರಿಂದ ಬಿಡಿಸಲಾದ 19 ವರ್ಷದ ಯುವತಿ ಓರಿ ಮೆಗಿದಿಶ್ ಆರೋಗ್ಯವಾಗಿದ್ದು, ಮರಳಿ ತಮ್ಮ ಕುಟುಂಬ ಸೇರಿಕೊಂಡಿದ್ದಾರೆ ಎಂದು ಮಿಲಿಟರಿ ಹೇಳಿದೆ. ಇದಕ್ಕೂ ಮುನ್ನ ಹಮಾಸ್ ನಾಲ್ವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು. ಇಸ್ರೇಲ್‌ನಲ್ಲಿ ಬಂಧನದಲ್ಲಿರುವ ಸಾವಿರಾರು ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡಿದರೆ ತನ್ನ ಬಳಿ ಇರುವ ಎಲ್ಲ ಇಸ್ರೇಲ್ ನಾಗರಿಕರನ್ನು ಬಿಡುವುದಾಗಿ ಹಮಾಸ್ ಹೇಳಿದೆ. ಆದರೆ ಇಸ್ರೇಲ್ ಇದನ್ನು ತಳ್ಳಿ ಹಾಕಿದೆ.