ಜೆರುಸಲೇಂ:ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ನಡುವಿನ ಯುದ್ಧ 19ನೇ ದಿನಕ್ಕೆ ಕಾಲಿಟ್ಟಿದ್ದು, ಹಮಾಸ್ ಉಗ್ರಗಾಮಿಗಳ ವಿರುದ್ಧ ಭೂ ಆಕ್ರಮಣಕ್ಕೆ ಮುಂದಾಗಿರುವ ಇಸ್ರೇಲ್, ಗಾಜಾ ಗಡಿ ಭಾಗದ ಮೇಲೆ ವೈಮಾನಿಕ ದಾಳಿಯನ್ನೂ ತೀವ್ರಗೊಳಿಸಿದೆ. ಗಾಜಾ ಪಟ್ಟಿಯಲ್ಲಿ ಹಮಾಸ್ ಸಂಘಟನೆ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿಯನ್ನು ಹೆಚ್ಚು ಮಾಡುತ್ತಿದೆ.
ಇಸ್ರೇಲ್ ಗಾಜಾ ಪಟ್ಟಿಯಾದ್ಯಂತ ವೈಮಾನಿಕ ದಾಳಿಯನ್ನು ಹೆಚ್ಚಿಸಿದೆ, ಕಳೆದ ದಿನ ನೂರಾರು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ವೈದ್ಯಕೀಯ ಸೌಲಭ್ಯಗಳನ್ನು ಮುಚ್ಚಲಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಗಾಜಾದಲ್ಲಿ ಪರಿಸ್ಥಿತಿ ಭೀಕರವಾಗುತ್ತಿದೆ. ವೈದ್ಯಕೀಯ ಸೌಲಭ್ಯ ಇಲ್ಲದೇ ಗಾಯಾಗಳು ನರಳುತ್ತಿದ್ದಾರೆ.
ಇಸ್ರೇಲ್ ಹಾಗೂ ಹಮಾಸ್ ನಡುವಿನ ನಿಲ್ಲದ ಯುದ್ಧದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕ, ನಿರಂತರವಾಗಿ ನಡೆಯುತ್ತಿರುವ ಬಾಂಬ್ ದಾಳಿಗಳಿಂದ ಗಾಜಾದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಯುದ್ಧ ಆ ಪ್ರದೇಶದಲ್ಲಿ ವ್ಯಾಪಕ ಸಂಘರ್ಷವನ್ನು ಉಂಟು ಮಾಡಬಹುದು ಎಂದು ಹೇಳಿದೆ.
ಅಕ್ಟೋಬರ್ 7 ರಂದು ಇಸ್ರೇಲ್ ಪಟ್ಟಣಗಳ ಮೇಲೆ ಹಮಾಸ್ ಉಗ್ರಗಾಮಿಗಳು ದಾಳಿ ಪ್ರಾರಂಭಿಸಿದಾಗಿನಿಂದ, ಗಾಜಾದ 2.3 ಮಿಲಿಯನ್ ಜನರು ಆಹಾರ, ನೀರು ಹಾಗೂ ಔಷಧಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಇದುವರೆಗೆ ಬೆಂಗಾವಲು ಪಡೆಗಳು ಒಂದಷ್ಟು ಭಾಗ ಅಗತ್ಯವಿರುವ ವಸ್ತುಗಳನ್ನು ಈಗಾಗಲೇ ಗಾಜಾಕ್ಕೆ ಸಾಗಿಸಿವೆ. ಈಗ ಇಸ್ರೇಲ್‌ನಲ್ಲಿ ಇಂಧನದ ಅಭಾವವೂ ಕಂಡು ಬರುತ್ತಿದ್ದು, ಒಂದು ವೇಳೆ ಟ್ರಕ್ಗಳಿಗೆ ಇಂಧನವಿಲ್ಲದೇ ಹೋದರೆ, ವಸ್ತುಗಳ ವಿತರಣೆಯನ್ನು ನಿಲ್ಲಿಸಬೇಕಾಗುತ್ತದೆ ಎಂದು ಅಮೆರಿಕ ಹೇಳಿದೆ. ಅಮೆರಿಕಾದ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್, ತನ್ನ ಮಿಲಿಟರಿ ಸಲಹೆಗಾರರನ್ನು ಕಳುಹಿಸುವ ಮೂಲಕ ಇಸ್ರೇಲ್ಗೆ ತನ್ನ ಯುದ್ಧ ಯೋಜನೆಗಳಲ್ಲಿ ಸಹಾಯ ಮಾಡುತ್ತಿದೆ.
19ನೇ ದಿನಕ್ಕೆ ಕಾಲಿಟ್ಟಿರುವ ಯುದ್ಧದಲ್ಲಿ ಇದುವರೆಗೆ ಕನಿಷ್ಠ 5,791 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದರೆ, 16,297 ಮಂದಿ ಗಾಯಗೊಂಡಿದ್ದಾರೆ ಎಂದು ಹಮಾಸ್ನ ಆರೋಗ್ಯ ಸಚಿವಾಲಯ ತಿಳಿಸಿದೆ. ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಅಕ್ಟೋಬರ್ 7 ರಿಂದ ಇಲ್ಲಿಯವರೆಗೆ 96 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದು, 1,650 ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲಿ ಅಧಿಕಾರಿಗಳ ಪ್ರಕಾರ ಇಸ್ರೇಲ್‌ನಲ್ಲಿ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಅದರಲ್ಲೂ ಪ್ರಾರಂಭದ ಹಮಾಸ್ ದಾಳಿಯಲ್ಲಿ ಸಾವನ್ನಪ್ಪಿದವರು ಬಹುತೇಕರು ಸಾಮಾನ್ಯ ನಾಗರಿಕರಾಗಿದ್ದಾರೆ. ಇದಲ್ಲದೇ, ವಿದೇಶಿಯರನ್ನು ಒಳಗೊಂಡಂತೆ 222 ಜನರನ್ನು ಆಕ್ರಮಣದ ಸಮಯದಲ್ಲಿ ಹಮಾಸ್ ವಶಪಡಿಸಿಕೊಂಡು, ಗಾಜಾಕ್ಕೆ ಕರೆದೊಯ್ದು ಒತ್ತೆಯಾಳಾಗಿರಿಸಿಕೊಂಡಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಅದರಲ್ಲಿ ಇದುವರೆಗೆ ನಾಲ್ವರನ್ನು ಬಿಡುಗಡೆ ಮಾಡಲಾಗಿದೆ. ನಾಲ್ವರನ್ನು ಬಿಡುಗಡೆ ಮಾಡಿರುವುದು ಇತರ ಒತ್ತೆಯಾಳಾಗಿರುವವರ ಕುಟುಂಬಗಳಿಗೆ ಸಣ್ಣ ಭರವಸೆಯನ್ನು ಮೂಡಿಸಿದೆ.
ಇದನ್ನೂ ಓದಿ :'ಉಗ್ರರ ಎಚ್ಚರಿಕೆ ಕಡೆಗಣಿಸಿದ್ದ ಸೇನೆ, ನಾವೀಗ ಸರ್ಕಾರದ ಬಲಿಪಶುಗಳು': ಹಮಾಸ್ ನರಕಸದೃಶ ಚಿತ್ರಣ ವಿವರಿಸಿದ ಇಸ್ರೇಲಿ ಮಹಿಳೆ